ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಅನಿರೀಕ್ಷಿತ ದಾಳಿಯನ್ನು ತಡೆಯಲು ವಿಫಲವಾಗಿರುವುದರ ಹೊಣೆ ಹೊತ್ತು ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಇಸ್ರೇಲ್ ಮಿಲಿಟರಿ ಗುಪ್ತಚರ ದಳದ ನಿರ್ದೇಶಕ ಮೇ.ಜ. ಅಹರಾನ್ ಹಲೀವಾ ಘೋಷಿಸಿದ್ದಾರೆ.
ಹಮಾಸ್ ಸಶಸ್ತ್ರ ಹೋರಾಟಗಾರರು ಇಸ್ರೇಲ್ನ ಗಡಿ ರಕ್ಷಣೆಯನ್ನು ಸ್ಫೋಟಿಸಿ ಇಸ್ರೇಲ್ನ ಪ್ರದೇಶಕ್ಕೆ ನುಗ್ಗಿ, ರಸ್ತೆಗಳಲ್ಲಿ ಮುಕ್ತವಾಗಿ ಸಂಚರಿಸಿದ್ದರು. ಹಮಾಸ್ನ ದಾಳಿಯನ್ನು ಸುಮಾರು 1,200 ಜನರು ಹತರಾಗಿದ್ದು ಸುಮಾರು 250 ಜನರನ್ನು ಗಾಝಾಕ್ಕೆ ಕೊಂಡೊಯ್ದು ಒತ್ತೆಸೆರೆಯಲ್ಲಿ ಇರಿಸಲಾಗಿದೆ. ಈ ದಾಳಿಯು ಗಾಝಾದಲ್ಲಿ 7 ತಿಂಗಳಿಂದ ಮುಂದುವರಿದಿರುವ ಇಸ್ರೇಲ್-ಹಮಾಸ್ ಯುದ್ಧಕ್ಕೆ ಕಾರಣವಾಗಿದೆ.
`ನನ್ನ ಕಮಾಂಡ್ ನಡಿ ಇದ್ದ ಗುಪ್ತಚರ ಪ್ರಾಧಿಕಾರವು ತನಗೆ ವಹಿಸಿಕೊಟ್ಟಿದ್ದ ಕಾರ್ಯದ ಹೊಣೆ ನಿರ್ವಹಿಸುವಲ್ಲಿ ವಿಫಲವಾಗಿದೆ. ಅಂದಿನಿಂದಲೂ ಆ ಕಪ್ಪುದಿನದ ಕಹಿನೆನಪು ನನಗೆ ಹಗಲು-ರಾತ್ರಿ ಕಾಡುತ್ತಿದೆ. ಈ ನೋವು ನನ್ನಲ್ಲಿ ಶಾಶ್ವತವಾಗಿ ಉಳಿಯಲಿದೆ’ ಎಂದು ಹಲೀವಾ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಭದ್ರತಾ ಲೋಪದ ಹೊಣೆಯನ್ನು ತಾನೇ ವಹಿಸುವುದಾಗಿ ಹಲೀವಾ ತಿಳಿಸಿದ್ದರು. ಹಲೀವಾ ಅವರ ರಾಜೀನಾಮೆಯನ್ನು ಸ್ವೀಕರಿಸಿರುವುದಾಗಿ ಇಸ್ರೇಲ್ ಮಿಲಿಟರಿ ಮುಖ್ಯಸ್ಥರು ಹೇಳಿದ್ದಾರೆ.