ಬೆಂಗಳೂರು: ಕಳೆದ ಐದು ವರ್ಷಗಳಲ್ಲಿ ಸಾವಯವ ಕೃಷಿಗಾಗಿ ರಾಜ್ಯದಲ್ಲಿ 228.80 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕೃಷಿ ಮತ್ತು ಆಹಾರ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ಅಭಿವೃದ್ಧಿ ಪ್ರಾಕಾರ ಮಾಹಿತಿ ಅನುಸಾರ ರಾಜ್ಯದಲ್ಲಿ 1,10,703 ಹೆಕ್ಟೇರ್ನಲ್ಲಿ ಸಾವಯವ ಕೃಷಿ ನಡೆಸಲಾಗುತ್ತಿದೆ. ಸಾವಯವದ ಅಭಿವೃದ್ಧಿಗೆ ಮಾರುಕಟ್ಟೆ ಆಧಾರಿತ ರ್ನಿಷ್ಟ ಬೆಳೆಯ ಕ್ಲಸ್ಟರ್ ಅಭಿವೃದ್ಧಿ, ದೃಢೀಕರಣ ಯೋಜನೆ, ಸಿರಿಧಾನ್ಯಗಳ ಮಾರುಕಟ್ಟೆ ಅಭಿವೃದ್ದಿ, ನೈಸರ್ಗಿಕ ಕೃಷಿ, ರೈತ ಸಿರಿ, ಸಿರಿಧಾನ್ಯ ನೈಸರ್ಗಿಕ ಉತ್ಪನ್ನಗಳ ಸಂಸ್ಕರಣೆ ಸಾವಯವ ಸಿರಿ ಯೋಜನೆ,
ಸಾವಯವ ಇಂಗಾಲ ಹೆಚ್ಚಿಸುವ ಅಭಿಯಾನ ಸೇರಿದಂತೆ 8ಕ್ಕೂ ಹೆಚ್ಚು ಯೋಜನೆಗಳು ಜಾರಿಗೆ ತರಲಾಗಿದೆ. 2004ರಲ್ಲಿ ಕೃಷಿ ನೀತಿ ಜಾರಿಗೊಳಿಸಲಾಗಿತ್ತು. ರೈತರಿಗೆ 5326 ತರಬೇತಿ ಶಿಬಿರಗಳನ್ನು ನೀಡಲಾಗಿದೆ. ಕೇಂದ್ರ ಸರ್ಕಾರ 2015-16ನೇ ಸಾಲಿನಿಂದ ಪರಂಪಾರಗತ ಕೃಷಿ ವಿಕಾಸ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಇದರಲ್ಲಿ ಕೇಂದ್ರ ಸರ್ಕಾರ 40 ಕೋಟಿ, ರಾಜ್ಯ ಸರ್ಕಾರ 27 ಕೋಟಿ ಸೇರಿ ಒಟ್ಟು 4 ವರ್ಷದಲ್ಲಿ 67 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ. ಸಾವಯವ ಸಿರಿ ಯೋಜನೆಯಡಿ ಕಳೆದ ವರ್ಷ 31.22 ಕೋಟಿ ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.