ಬೆಂಗಳೂರು: ಹಾಸನ ಅಭಿವೃದ್ಧಿ ಆಗಿಲ್ಲ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಸರಿಯಲ್ಲ. ಈ ಕೂಡಲೇ ಅವರು ತಮ್ಮ ಹೇಳಿಕೆಯನ್ನು ಮರು ಪರಿಶೀಲನೆ ಮಾಡಬೇಕು ಎಂದು ಜೆಡಿಎಸ್ ಸದಸ್ಯ ಸೂರಜ್ ರೇವಣ್ಣ ಆಗ್ರಹಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಬೇಲೂರಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಹಾಸನ ಜಿಲ್ಲೆ ಅಭಿವೃದ್ಧಿಯಾಗಿಲ್ಲ.
ಅಲ್ಲಿ ಒಂದು ಕುಟುಂಬದ ಪಾರಮ್ಯವಿದೆ ಎಂದು ಟೀಕಿಸಿದ್ದಾರೆ. ನಮ್ಮ ಕುಟುಂಬದ ಬಗ್ಗೆ ಅವರು ಮಾತನಾಡಿದ್ದಾರೆ. ಆದರೆ ಅವರ ಬಗ್ಗೆ ನಾವು ಗೌರವ ಇಟ್ಟುಕೊಂಡಿದ್ದೇವೆ. ಹಾಸನ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಸರ್ಕಾರ ಅನುದಾನ ನೀಡಿದೆ. ಹೈಟೆಕ್ ಆಸ್ಪತ್ರೆ, ಹೈಟೆಕ್ ಬಸ್ ನಿಲ್ದಾಣ ಸೇರಿದಂತೆ ಸಾಕಷ್ಟು ಅಭಿವೃದ್ಧಿಯನ್ನು ನಮ್ಮ ತಂದೆ ರೇವಣ್ಣ ಮಾಡಿದ್ದಾರೆ. ಹಾಗಾಗಿ ಬೊಮ್ಮಾಯಿ ಅವರು ಬೇಲೂರಿನಲ್ಲಿ ನೀಡಿದ ಹೇಳಿಕೆಯನ್ನು ಮರು ಪರಿಶೀಲಿಸಬೇಕು” ಎಂದು ಹೇಳಿದ್ದಾರೆ.