ನವದೆಹಲಿ: ಸಿಂಗಾಪುರ ಹಾಗೂ ಹಾಂಕಾಂಗ್ ಗಳಲ್ಲಿ ತಮ್ಮ ಯಾವುದೇ ಮಸಾಲೆ ಪದಾರ್ಥಗಳನ್ನು ನಿಷೇಧಿಸಿಲ್ಲ ಎಂದು ಭಾರತದ ಜನಪ್ರಿಯ ಮಸಾಲೆ ಬ್ರ್ಯಾಂಡ್ ಆದ ಎವರೆಸ್ಟ್ ಸ್ಪಷ್ಟಪಡಿಸಿದೆ. ಸಿಂಗಾಪುರ – ಹಾಂಕಾಂಗ್ ಸರ್ಕಾರದ ಆಹಾರ ಸುರಕ್ಷತಾ ಕೇಂದ್ರ (ಸಿಎಫ್ ಸಿ), ಭಾರತದಿಂದ ಸಿಂಗಾಪುರಕ್ಕೆ ಹಾಗೂ ಹಾಂಕಾಂಗ್ ರಫ್ತು ಆಗುವ ಮಸಾಲೆ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ರಾಸಾಯನಿಕಗಳು ಪತ್ತೆಯಾಗಿರುವುದಾಗಿ ವರದಿ ನೀಡಿದ್ದು,
ಆ ಹಿನ್ನೆಲೆಯಲ್ಲಿ ಸಿಂಗಾಪುರ ಹಾಗೂ ಹಾಂಕಾಂಗ್ ಗಳಲ್ಲಿ ಭಾರತದ ಎಂಡಿಎಚ್ ಹಾಗೂ ಎವರೆಸ್ಟ್ ಮಸಾಲೆ ಪದಾರ್ಥಗಳ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ವರದಿಗಳು ಬಂದಿದ್ದವು. ಆ ಹಿನ್ನೆಲೆಯಲ್ಲಿ ಏ. 23ರಂದು ಎವರೆಸ್ಟ್ ಸಂಸ್ಥೆಯಿಂದ ಈ ಸ್ಪಷ್ಟನೆ ಹೊರಬಿದ್ದಿದೆ.
ಸಿಂಗಾಪುರ ಹಾಗೂ ಹಾಂಕಾಂಗ್ ದೇಶಗಳಲ್ಲಿ ನಮ್ಮ ಯಾವುದೇ ಮಸಾಲೆ ಪದಾರ್ಥಗಳು ನಿಷೇಧಿಸಲ್ಪಟ್ಟಿಲ್ಲ. ಆ ಎರಡೂ ದೇಶಗಳಿಗೆ ನಮ್ಮ ಕಂಪನಿಯ 60ಕ್ಕೂ ಹೆಚ್ಚು ರೀತಿಯ ಮಸಾಲೆ ಪದಾರ್ಥಗಳು ರಫ್ತಾಗುತ್ತಿವೆ. ಅವುಗಳಲ್ಲಿ ಒಂದನ್ನು ಮಾತ್ರ ಪರೀಕ್ಷೆಗೊಳಪಡಿಸಲಾಗಿದೆಯಷ್ಟೆ. ಆ ರೀತಿ ಪರೀಕ್ಷೆಗೊಳಪಡಿಸುವಾಗ ಅದರ ಬಳಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಸೂಚಿಸಲಾಗುತ್ತದೆ.
ಅದೊಂದು ಸಾಮಾನ್ಯ ಪರೀಕ್ಷಾ ಪ್ರಕ್ರಿಯೆಯಷ್ಟೇ. ಹಾಗೆಂದ ಮಾತ್ರಕ್ಕೆ ಅದು ನಮ್ಮ ಉತ್ಪನ್ನಗಳ ನಿಷೇಧವಲ್ಲ’’ ಎಂದು ಕಂಪನಿ ಸ್ಪಷ್ಟಪಡಿಸಿದೆ.ಜೊತೆಗೆ, ನಮ್ಮ ಮಸಾಲೆ ಪದಾರ್ಥಗಳು ಉತ್ತಮ ಗುಣಮಟ್ಟವುಳ್ಳವಾಗಿದ್ದು, ಅತ್ಯುತ್ತಮ ದರ್ಜೆಯ ಪದಾರ್ಥಗಳಿಂದ ತಯಾರಿಸಲ್ಪಟ್ಟಿವೆ. ಹಾಗಾಗಿ, ನಮ್ಮ ಗ್ರಾಹಕರು ಯಾವುದೇ ರೀತಿಯ ಆತಂಕಕ್ಕೊಳಗಾಬಾರದು ಎಂದು ಎವರೆಸ್ಟ್ ಕಂಪನಿಯು ಭರವಸೆಯನ್ನು ಕೊಟ್ಟಿದೆ.