ದೇಶದ ಪ್ರಮುಖ ಐಟಿ ಕಂಪನಿಯಾದ ಇನ್ಫೋಸಿಸ್ ಮಾರ್ಚ್ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿದ್ದು, ಬರೋಬ್ಬರಿ 7,969 ಕೋಟಿ ರೂ. ನಿವ್ವಳ ಲಾಭ ಗಳಿಸಿರುವುದಾಗಿ ಹೇಳಿದೆ. ಇದಾದ ಬೆನ್ನಲ್ಲೇ ಕಂಪನಿ 28 ರೂ. ಲಾಭಾಂಶ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಇನ್ಫೋಸಿಸ್ ಸಹ ಸಂಸ್ಥಾಪಕ ಎನ್ಆರ್ ನಾರಾಯಣ ಮೂರ್ತಿಯವರ 5 ತಿಂಗಳ ಮೊಮ್ಮಗನಿಗೆ ಬರೋಬ್ಬರಿ 4.2 ಕೋಟಿ ರೂ. ಲಾಭಾಂಶ ಬಂದಿದೆ.
ಕೆಲ ತಿಂಗಳ ಹಿಂದಷ್ಟೇ ನಾರಾಯಣ ಮೂರ್ತಿಯವರು ತಮ್ಮ ಮೊಮ್ಮಗನಿಗೆ ಇನ್ಫೋಸಿಸ್ನ ಶೇ. 0.04ರಷ್ಟು ಅಥವಾ 15 ಲಕ್ಷ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದರು. ಮೊಮ್ಮಗನ ಹೆಸರಿನಲ್ಲಿರುವ ಇನ್ಫೋಸಿಸ್ ಷೇರುಗಳ ಪ್ರಸ್ತುತ ಮೌಲ್ಯ ಬರೋಬ್ಬರಿ 210 ಕೋಟಿ ರೂ. ಆಗಿದೆ.
ಇನ್ಫೋಸಿಸ್ ಕಳೆದ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿ, ಇದೇ ವೇಳೆಯಲ್ಲಿ ಪ್ರತಿ ಷೇರಿಗೆ ಒಟ್ಟಾರೆ 28 ರೂ. ಲಾಭಾಂಶ ಘೋಷಿಸಿತ್ತು. ಇದರಲ್ಲಿ ಅಂತಿಮ ಡಿವಿಡೆಂಡ್ 20 ರೂ. ಮತ್ತು ಹೆಚ್ಚುವರಿ ವಿಶೇಷ ಡಿವಿಡೆಂಡ್ 8 ರೂ. ಆಗಿದ್ದು, ಒಟ್ಟು 28 ರೂ. ಲಾಭಾಂಶ ಇನ್ಫೋಸಿಸ್ನ ಪ್ರತಿ ಷೇರಿಗೆ ಸಿಗಲಿದೆ. ಇನ್ಫೋಸಿಸ್ ಡಿವಿಡೆಂಡ್ನ ಪಾವತಿ ದಿನಾಂಕವನ್ನು ಮೇ 31ರಂದು ಎಂದು ನಿಗದಿಪಡಿಸಿದ್ದು, ಜುಲೈ 1ರಂದು ಇದರ ನಿಜವಾದ ವಿತರಣೆ ನಡೆಯಲಿದೆ.
ಕಳೆದ ವರ್ಷ 2023ರ ನವೆಂಬರ್ 10ರಂದು ಬೆಂಗಳೂರಿನಲ್ಲಿ ಜನಿಸಿದ ಏಕಾಗ್ರಹ್ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಮಗ ರೋಹನ್ ಮೂರ್ತಿ ಮತ್ತು ಅಪರ್ಣ ಕೃಷ್ಣನ್ ಮಗನಾಗಿದ್ದಾನೆ. ಏಕಾಗ್ರಹ್ ತಂದೆ ಹಾರ್ವಡ್ ಯೂನಿವರ್ಸಿಟಿಯಲ್ಲಿ ಕಂಪ್ಯೂಟರ್ ಸೈನ್ಸ್ನಲ್ಲಿ ಪಿಎಚ್ಡಿ ಪದವಿ ಪಡೆದಿದ್ದಾರೆ. ಪ್ರಸ್ತುತ ಬೋಸ್ಟನ್ ಮೂಲದ ಸಾಫ್ಟ್ವೇರ್ ಕಂಪನಿ ಸೊರೊಕೊವನ್ನು ಮುನ್ನಡೆಸುತ್ತಿದ್ದಾರೆ. ಏಕಾಗ್ರಹ್ನ ತಾಯಿ ಅಪರ್ಣ ಮೂರ್ತಿ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ.