ಲೋಕಸಭಾ ಚುನಾವಣೆಯ ಮತದಾನ ಹತ್ತಿರವಾಗುತ್ತಿದ್ದಂತೆ ಹಾಸನದ ಪೆನ್ ಡ್ರೈವ್ ಸುದ್ದಿ ರಾಜ್ಯಾದ್ಯಂತ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಆದರೆ ಈ ಕುರಿತು ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ಇರುವುದಕ್ಕೆ ರಾಜ್ಯದ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತು ತನಿಖಾ ವರದಿಗಾರಾದ ಭಗತ್ ಸಿಂಗ್ ಅವರು ರಾಜ್ಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ, ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಎಂಬುವವರು ಕೆಲವು ಹೆಣ್ಣು ಮಕ್ಕಳನ್ನು ತನ್ನ ಅಧಿಕಾರದಿಂದ ಎದುರಿಸಿ ಬೆದರಿಸಿ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿರುವುದು ಕಂಡು ಬಂದಿದೆ. ಇದರ ಜೊತೆಗೆ ತನ್ನ ಮೊಬೈಲ್ ನಲ್ಲಿ ಆ ಹೆಣ್ಣು ಮಕ್ಕಳ ಖಾಸಗಿ ದೃಶ್ಯಾವಳಿಗಳನ್ನು ಚಿತ್ರಿಸಿದ್ದಾರೆ. ಅಷ್ಟೆ ಅಲ್ಲದೆ ತನ್ನ ಮನೆಯಲ್ಲಿ ಕೆಲಸಮಾಡುವ ತಾಯಿ ವಯಸ್ಸಿನ ಮಹಿಳೆಯನ್ನ ಸಹ ಹೆದರಿಸಿ ಅಶ್ಲೀಲವಾಗಿ ತನ್ನ ಮೊಬೈಲ್ ನಲ್ಲಿ ಖಾಸಗಿ ವಿಡಿಯೋ ಚಿತ್ರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿರುತ್ತಾರೆ. ಇದರಿಂದ ತಾನು ಬಳಸಿಕೊಂಡ ಹೆಣ್ಣು ಮಕ್ಕಳ ಕುಟುಂಬದವರ ಪರಿಸ್ಥಿತಿ ಹಾಗೂ ಅವರ ಮಕ್ಕಳ ಪರಿಸ್ಥಿತಿ ಏನಾಗುವುದೆಂದು ಊಹಿಸಿಕೊಳ್ಳಿ. ಮಹಿಳಾ ಆಯೋಗ ಇರುವುದು ಹೆಣ್ಣು ಮಕ್ಕಳ ರಕ್ಷಣೆಗೆ. ಈಗಾಗಲೇ ಹಲವು ಸಾಮಾಜಿಕ ಜಾಲತಾಣದಲ್ಲಿ ಕೆಲವು ಹೆಣ್ಣು ಮಕ್ಕಳ ನಗ್ನ ವಿಡಿಯೋ ಹರಿದಾಡುತ್ತಿದ್ದು ಹಾಗೂ ಮೇಲ್ನೋಟಕ್ಕೆ ಪ್ರಜ್ವಲ್ ರೇವಣ್ಣ ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿರುವ ಹಾಗೆ ಕಾಣುತ್ತಿದೆ. ಹೆಣ್ಣು ಮಕ್ಕಳ ಪರವಾಗಿ ನಿಲ್ಲಬೇಕಾದ ಆಯೋಗ ಯಾವುದೇ ಸುಮೋಟೋ ಕೇಸ್ ದಾಖಲಿಸಿಕೊಂಡಿಲ್ಲ. ಪ್ರಜ್ವಲ್ ರೇವಣ್ಣರನ್ನ ಬಂಧಿಸಿ ಅವರ ಬಳಿ ಇರುವ ವಿಡಿಯೋಗಳನ್ನ ವಶಕ್ಕೆ ಪಡೆದು ಅತ್ಯಾಚಾರ ಪ್ರಕರಣ ದಾಖಲಿಸಿಕೊಳ್ಳದೆ, ಇಲ್ಲಿವರೆಗೂ ಸುಮ್ಮನೆ ಕೂತಿದೆ.
ಈ ಮೂಲಕ ಹೆಣ್ಣು ಮಕ್ಕಳ ಬಗ್ಗೆ ತಮಗೆ ಯಾವ ಒಲವಿದೆಯೆಂದು ಕಾಣುತ್ತಿದೆ. ಹೆಣ್ಣು ಮಕ್ಕಳ ರಕ್ಷಣೆಗಿಲ್ಲದ ಆಯೋಗ ಇದ್ದರೇನು ಪ್ರಯೋಜನ. ಸಾರ್ವಜನಿಕರಿಗೊಂದು ನ್ಯಾಯ ಅಧಿಕಾರದಲ್ಲಿರುವ ಪ್ರಭಾವಿ ರಾಜಕಾರಣಿಗಳಿಗೆ ಒಂದು ನ್ಯಾಯ ಮಾಡುತ್ತಿದ್ದೀರಾ ಅನ್ನೋ ಅನುಮಾನ ಕಾಡುತ್ತಿದೆ. ಇದ್ಯಾವುದಕ್ಕೂ ಅವಕಾಶ ಕೊಡದೆ ಮಹಿಳೆಯರ ಪರವಾಗಿ ನಿಲ್ಲಬೇಕಾದ ಮಹಿಳಾ ಆಯೋಗದ ಅಧ್ಯಕ್ಷರಾದ ತಾವುಗಳು ಈ ಕೂಡಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ. ನಾವು ನೀಡುತ್ತಿರುವ ದೂರನ್ನು ದಾಖಲಿಸಿಕೊಂಡು ಮಹಿಳೆಯರಿಗಾಗಿರುವ ಅನ್ಯಾಯದ ಪರ ನಿಲ್ಲಬೇಕಾಗಿ ಮನವಿ. ಅವರು ಪ್ರಭಾವಿ ಇರೋದ್ರಿಂದ ಸಾಕ್ಷಿ ನಾಶ ಕೂಡ ಮಾಡುಬಹದು. ಆದ ಕಾರಣ ತಕ್ಷಣ ಆತನನ್ನ ಬಂಧಿಸಿ ಲಭ್ಯ ಇರುವ ಸಾಕ್ಷಿಗಳನ್ನ ವಶಪಡಿಸಿಕೊಳ್ಳಲು ಮನವಿ.
ಈ ದೂರಿನ ಜೊತೆ ಸಂಸದ ಪ್ರಜ್ವಲ್ ರೇವಣ್ಣ ಮಹಿಳೆಯರ ಜೊತೆ ಅತ್ಯಾಚಾರ ನಡೆಸಿರುವ ವಿಡಿಯೋ ಹಾಗೂ ಮೊಬೈಲ್ ನಲ್ಲಿ ಮಹಿಳೆಯರ ಖಾಸಗಿ ಚಿತ್ರೀಕರಣ ಮಾಡಿಕೊಂಡಿರುವ ವಿಡಿಯೋವನ್ನು ದಾಖಲೆ ಸಮೇತ ತಮಗೆ ನೀಡುತ್ತಿದ್ದೇನೆ ಎಂದು ಪತ್ರ ಬರೆದಿದ್ದಾರೆ.