ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಸಿನಿಮಾದ ಬಳಿಕ ಚಿತ್ರದ ನಿರ್ದೇಶಕ ಕಿರಣ್ ರಾಜ್ ನಿರ್ದೇಶನದ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಶುರುವಾಗಿದೆ. ಇದೀಗ ಕಿರಣ್ ರಾಜ್ ಬಾಲಿವುಡ್ ನಟ ಜಾನ್ ಅಬ್ರಾಹಂ ಅವರನ್ನು ಭೇಟಿ ಮಾಡಿ ಕುತೂಹಲ ಮೂಡಿಸಿದ್ದಾರೆ.
ಕೆಲ ತಿಂಗಳ ಹಿಂದೆ ಹೊಸದೊಂದು ಪ್ರಾಜೆಕ್ಟ್ ಕೈಗೆತ್ತಿಕೊಂಡಿರುವ ಬಗ್ಗೆ ಕಿರಣ್ ರಾಜ್ ಹೇಳಿಕೊಂಡಿದ್ದರು. ಅದೊಂದು ಕಾಮಿಡಿ ಹಾರರ್ ಚಿತ್ರ ಎಂದು ಮಾಹಿತಿ ಹಂಚಿಕೊಂಡಿದ್ದರು. ವಿಎಫ್ ಎಕ್ಸ್ ತುಂಬಾ ಇರುವ ಕಾರಣದಿಂದಾಗಿ ಅದನ್ನು ಕಲಿಯಲು ಹೊರಟಿದ್ದೇನೆ ಎಂದಿದ್ದರು. ವಿದೇಶಕ್ಕೂ ಹಾರಿದ್ದರು.
ಕಿರಣ್ ರಾಜ್ ಇದೀಗ ವಿದೇಶದಿಂದ ವಾಪಸ್ಸಾಗಿದ್ದರು. ಬಂದವರೇ ಬಾಲಿವುಡ್ ನತ್ತ ಮುಖ ಮಾಡಿದ್ದಾರೆ. ಮುಂಬೈನಲ್ಲಿ ಅವರು ಬಾಲಿವುಡ್ ನಟ ಜಾನ್ ಅಬ್ರಾಹಂ ಅವರನ್ನು ಭೇಟಿ ಮಾಡಿದ್ದು, ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೊಂದು ಅತ್ಯುತ್ತಮ ಗಳಿಗೆ ಎಂದು ಬರೆದುಕೊಂಡಿದ್ದಾರೆ.
ಹಲವು ಭಾಷೆಗಳಲ್ಲಿ ತಮ್ಮ ಸಿನಿಮಾ ನಿರ್ಮಾಣವಾಗಲಿದೆ ಎಂದು ಹೇಳಿದ್ದರಿಂದ, ಮುಂದಿನ ಸಿನಿಮಾವನ್ನು ಜಾನ್ ಅಬ್ರಾಹಂಗಾಗಿ ಮಾಡಲಿದ್ದಾರಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.