ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾ ಚಿತ್ರದ ಮಾಜಿ ನಟ ಗುರುಚರಣ್ ಸಿಂಗ್ ದೆಹಲಿಯಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ದೂರು ದಾಖಲಿಸಿದ್ದ ನಟನ ಕುಟುಂಬಸ್ಥರು ಹುಡುಕಿಕೊಡುವಂತೆ ಮನವಿ ಮಾಡಿಕೊಂಡಿದ್ದರು. ಇದೀಗ ನಟನ ಗುರುತು ಸಿಸಿಟಿವಿಯಲ್ಲಿ ಪತ್ತೆಯಾಗಿದೆ.
ದೂರು ದಾಖಲಾಗುತ್ತಿದ್ದಂತೆಯೇ ದೆಹಲಿ ಪೊಲೀಸರು ತಂಡಗಳನ್ನು ರಚಿಸಿ, ನಟನೆ ಹುಡುಕಾಟ ಆರಂಭಿಸಿದ್ದರು. ಪೊಲೀಸರಿಗೆ ಕೆಲವು ಮಾಹಿತಿಗಳು ಲಭ್ಯವಾಗಿದ್ದು, ಏಪ್ರಿಲ್ 22ರಂದು ರಾತ್ರಿ 9.14ಕ್ಕೆ ದೆಹಲಿಯ ಪಾಲಂ ಪ್ರದೇಶದ ಪರುಶುರಾಮ್ ಚೌಕ್ ನಲ್ಲಿ ನಟ ಸಿಂಗ್ ತಮ್ಮ ಬೆನ್ನಿನ ಮೇಲೆ ಬ್ಯಾಗ್ ನೇತಾಕಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ತಿಳಿಸಿದ್ದಾರೆ.
ಚಿತ್ರೀಕರಣಕ್ಕೆ ತೆರಳುತ್ತೇನೆಂದು ಮನೆಯಲ್ಲಿ ಹೇಳಿ ಮನೆಯಿಂದ ಹೊರಟ ತಾರಕ್ ಮೆಹ್ತಾ ಚಶ್ಮಾ ಧಾರಾವಾಹಿ ಖ್ಯಾತಿಯ ನಟರಾಗಿದ್ದಾರೆ. ದೆಹಲಿಯಿಂದ ಮುಂಬೈಗೆ ತೆರಳಿದ್ದ ಅವರು ಏರ್ ಪೋರ್ಟ್ ನಿಂದ ಕಾಣೆಯಾಗಿದ್ದಾರೆ ಎಂದು ಅವರ ತಂದೆ ಹರ್ಜಿತ್ ಸಿಂಗ್ ದೂರು ದಾಖಲಿಸಿದ್ದಾರೆ.
ಐವತ್ತರ ವಯಸ್ಸಿನ ನಟ ಮುಂಬೈ ತಲುಪಿಲ್ಲ ಎಂದು ಗೊತ್ತಾಗುತ್ತಿದ್ದಂತೆಯೇ ಕುಟುಂಬಸ್ಥರು ಅವರ ಮೊಬೈಲ್ ಗೆ ಕಾಲ್ ಮಾಡಿದರೂ, ಸ್ವಿಚ್ ಆಫ್ ಬಂದಿರೋದು ಆತಂಕಕ್ಕೆ ಕಾರಣವಾಗಿದೆ. ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ನಾಪತ್ತೆಯಾದ ನಟನಿಗಾಗಿ ಹುಡುಕಾಟ ಆರಂಭಿಸಿದ್ದು, ಇದೀಗ ಲಭ್ಯವಾಗಿರುವ ಸಿಸಿಟಿವಿ ಫೂಟೇಜ್ ಅವಲಂಭಿಸಿ ಮತ್ತಷ್ಟು ಹುಡುಕಾಟ ಶುರುಮಾಡಿದ್ದಾರೆ.