ಗುಜರಾತ್ ಮೂಲದ ಮಹಿಳೆಯರು ಸಂಚರಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಮೃಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಎಸ್ ಯುವಿ ಕಾರು ಸುಮಾರು 20 ಅಡಿ ಎತ್ತರದ ಮರವೇರಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಖೀಬೆನ್ ಪಟೇಲ್, ಸಂಗೀತಾಬೆನ್ ಪಟೇಲ್ ಹಾಗೂ ಮನಿಶಾಬೆನ್ ಪಟೇಲ್ ಮೃತ ದುರ್ದೈವಿಗಳು. ಮೃತರು ಗುಜರಾತ್ನ ಆನಂದ್ ಜಿಲ್ಲೆಯವರಾಗಿದ್ದು, ಸೌತ್ ಕ್ಯಾರೊಲಿನಾದ ಗ್ರೀನ್ವಿಲ್ಲೆ ಕೌಂಟಿ ಬಳಿಯ ಸೇತುವೆ ಹತ್ತಿರ ಕಾರಿನಲ್ಲಿ ಸಂಚರಿಸುವಾಗ ಈ ಅಪಘಾತ ಸಂಭವಿಸಿದೆ.
‘ಅತ್ಯಂತ ವೇಗವಾಗಿ ಸಂಚರಿಸಿದ ಕಾರು ರಸ್ತೆ ಲೇನ್ಗಳನ್ನು ದಾಟಿ ಮರಕ್ಕೆ ಡಿಕ್ಕಿ ಹೊಡೆದಿದೆ. ವೇಗ ನಿಯಂತ್ರಿಸಲಾಗದೆ ಸೇತುವೆಯ ಮತ್ತೊಂದು ಬದಿಯಲ್ಲಿದ್ದ 20 ಅಡಿ ಎತ್ತರದ ಮರವನ್ನು ಕಾರು ಏರಿದೆ. ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ವೇಗದಲ್ಲಿ ಕಾರು ಸಂಚರಿಸುತ್ತಿತ್ತು’ ಎಂದು ಸಂಚಾರ ವಿಭಾಗದ ಅಧಿಕಾರಿ ಮೈಕ್ ಎಲ್ಲಿಸ್ ತಿಳಿಸಿದ್ದಾರೆ.
‘ಕಾರಿನ ವೇಗ ಹೆಚ್ಚಾಗಿದ್ದರಿಂದ ಅದು ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಸುಮಾರು 4ರಿಂದ 6 ಲೇನ್ಗಳನ್ನು ಇದು ಹಾರಿಹೋಗಿ, ಮರಕ್ಕೆ ಡಿಕ್ಕಿ ಹೊಡೆದಿದೆ. ಸದ್ಯ ಕಾರಿನ ಗಾಲಿಗಳು ನೆಲದ ಮೇಲಿವೆ. ಆದರೆ ಅಪಘಾತ ಸಂಭವಿಸುವ ಮೊದಲು ಚಕ್ರಗಳೂ ನೆಲದ ಮೇಲಿಲ್ಲದಂತ ವೇಗದಲ್ಲಿ ಸಂಚರಿಸಿ, ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಅದು 20 ಅಡಿ ಎತ್ತರದ ಮರದ ಮೇಲೆ ನಿಂತಿದೆ’ ಎಂದಿದ್ದಾರೆ.
‘ಸೌತ್ ಕ್ಯಾರೊಲಿನಾ ಹೆದ್ದಾರಿ ಪ್ಯಾಟ್ರೋಲ್ ವಾಹನ ತಕ್ಷಣ ರಕ್ಷಣೆಗೆ ಧಾವಿಸಿದೆ. ವಿವಿಧ ರಕ್ಷಣಾ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ನಡೆಸಿವೆ. ಕಾರಿನಲ್ಲಿದ್ದು ಬದುಕುಳಿದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಅಪಘಾತ ಎಚ್ಚರಿಕೆ ಸಂದೇಶವು, ಮನೆಯಲ್ಲಿದ್ದ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದೆ. ಅವರು ನಂತರ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.