ಚಂದ್ರು ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ನಟನೆಯ ಕಬ್ಜ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಸಿನಿಮಾ ಅಂದುಕೊಂಡಷ್ಟು ಮಟ್ಟಿಗೆ ಹೆಸರು ಮಾಡಲಿಲ್ಲ. ಆದರೆ ಚಂದ್ರು ಉತ್ತಮವಾಗಿ ಬಿಸ್ನೆಸ್ ಮಾಡಿದೆ ಎಂದು ಹೇಳಿಕೊಂಡಿದ್ದರು. ‘ಕಬ್ಜಾಗೆ ಚಂದ್ರು ಓವರ್ ಹೈಪ್ ಕೊಟ್ಟರು’ ಎಂಬರ್ಥದಲ್ಲಿ ಶಿವಣ್ಣ ಮಾತನಾಡಿದ್ದ ವಿಡಿಯೋ ವೈರಲ್ ಆಗಿತ್ತು. ಇದನ್ನು ಟ್ರೋಲ್ ಪೇಜ್ಗಳಲ್ಲಿ ಬಳಕೆ ಮಾಡಿಕೊಂಡು ಕಬ್ಜ ಸಿನಿಮಾದ ಬಗ್ಗೆ ಶಿವಣ್ಣಗೆ ಅಸಮಾಧಾನ ಇದೆ ಎಂದೆಲ್ಲ ಸುದ್ದಿ ಹಬ್ಬಿಸಲಾಯಿತು. ಈ ಬಗ್ಗೆ ಶಿವಣ್ಣ ಮಾತನಾಡಿದ್ದಾರೆ.
ಇತ್ತೀಚೆಗೆ ಚಂದ್ರು ಅವರು ತಮ್ಮ ನಿರ್ಮಾಣದ ಬ್ಯಾಕ್ ಟು ಬ್ಯಾಕ್ ಐದು ಸಿನಿಮಾ ಘೋಷಿಸಿದ್ದರು. ಇದರಲ್ಲಿ ‘ಫಾದರ್’ ಕೂಡ ಒಂದು. ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸ್ತಿರೊ ಈ ಚಿತ್ರಕ್ಕೆ ಅಮೃತಾ ಅಯ್ಯಂಗಾರ್ ನಾಯಕಿ. ಬೆಂಗಳೂರಿನ ಬಂಡಿ ಮಾಕಾಳಮ್ಮ ದೇವಸ್ಥಾನದಲ್ಲಿ ಮುಹೂರ್ತ ನಡೆದಿದೆ. ಇದಕ್ಕೆ ಶಿವಣ್ಣ ಆಗಮಿಸಿ ಸಾಥ್ ನೀಡಿದ್ದು, ಆರ್ ಚಂದ್ರು ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು.
‘ಚಂದ್ರು ಏನೇ ಮಾಡಿದರೂ ಸ್ಟೈಲ್ ಆಗಿ ಮಾಡ್ತಾರೆ. ಆಡಂಬರ ಸ್ವಲ್ಪ ಜಾಸ್ತಿಯೇ ಇರುತ್ತೆ. ನಾನು ಮಾತನಾಡುವಾಗ ಅವರ ಬಗ್ಗೆ ಮಾತನಾಡಲಿ ಎಂದು ನಿರೀಕ್ಷಿಸುತ್ತಾರೆ. ಅವರು ನಿರೀಕ್ಷಿಸುತ್ತಾರೆ ಎಂದು ನಾನು ಮಾತನಾಡಲ್ಲ, ಇಷ್ಟಪಟ್ಟು ಮಾತಾಡ್ತೀನಿ. ತಂದೆ ಸೆಂಟಿಮೆಂಟ್ ಚೆನ್ನಾಗಿ ಕಟ್ಟಿಕೊಡ್ತಾರೆ. ಅವರ ಸಿನಿಮಾಗಳು ಎಮೋಷನ್ ಆಗಿ ಕನೆಕ್ಟ್ ಆಗುತ್ತವೆ. ಮೈಲಾರಿ ಸಿನಿಮಾ ಮಾಡೋವಾಗ ತಂದೆಗೆ ಕನೆಕ್ಟ್ ಆಗೋ ಪಾತ್ರ ಇತ್ತು’ ಎಂದು ಶಿವಣ್ಣ ಹೇಳಿದರು. ‘ಫಾದರ್’ ಸಿನಿಮಾದಲ್ಲಿ ತಂದೆ-ಮಗನ ಬಾಂಧವ್ಯದ ಬಗ್ಗೆ ಇದೆ ಎಂದಿದ್ದಾರೆ.
ಇನ್ನು, ವೈರಲ್ ಆದ ವಿಡಿಯೋ ಬಗ್ಗೆ ಶಿವಣ್ಣಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಶಿವಣ್ಣ ಉತ್ತರ ನೀಡಿದ್ದಾರೆ. ‘ನನ್ನ ಹಾಗೂ ಚಂದ್ರುನ ಯಾರೂ ಬೇರೆ ಮಾಡೋಕಾಗಲ್ಲ. ಚಂದ್ರು ನನ್ನ ಬಾಂಧವ್ಯ ಯಾವಾಗಲೂ ಇರುತ್ತದೆ. ಸೋಶಿಯಲ್ ಮೀಡಿಯಾ ಆಟದ ಸಾಮಾನಿನ ರೀತಿ ಆಗಿದೆ. ಅದನ್ನು ಜನರು ಒಳ್ಳೆಯದಕ್ಕೆ ಬಳಸಿಕೊಳ್ಳುವಂತಾಗಲಿ. ಯಾವ ಮೀಡಿಯಾನೂ ಏನು ಮಾಡೋಕಾಗಲ್ಲ’ ಎಂದು ಹೇಳಿದ್ದಾರೆ.