ಬೆಂಗಳೂರು: ರಾಜ್ಯದಲ್ಲಿ ಜನ ಕಾಂಗ್ರೆಸ್ನ ಗ್ಯಾರಂಟಿ ಯೋಜನೆಯಿಂದ ಜೀವನ ಮಾಡುತ್ತಿದ್ದಾರೆ. ನಮ್ಮ ಗ್ಯಾರಂಟಿ ಜನರನ್ನು ರಕ್ಷಿಸುತ್ತಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ಕೇಂದ್ರ ಸರ್ಕಾರ ನೀಡಿದ 3,454 ಕೋಟಿ ರೂ. ಬರ ಪರಿಹಾರ ಅಲ್ಪ ಪ್ರಮಾಣದ್ದು ಎಂದು ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.
ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ರಾಜ್ಯ ಸರ್ಕಾರ ನೀಡುತ್ತಿರುವ ಗ್ಯಾರಂಟಿಯಿಂದ ಜನಕ್ಕೆ ಅನುಕೂಲವಾಗಿದೆ ಎಂದಿದ್ದಾರೆ. ಕರ್ನಾಟಕ ಸೆಪ್ಟೆಂಬರ್ನಲ್ಲಿ ಬರ ಪರಿಹಾರಕ್ಕೆ ಅರ್ಜಿ ಕೊಟ್ವಿತ್ತು. ಸೆಪ್ಟೆಂಬರ್ನಿಂದ ಇಲ್ಲಿವರೆಗೂ 50 ಸಾವಿರ ಕೋಟಿ ರೂ. ಮತ್ತೆ ನಷ್ಟ ಆಗಿದೆ.
ನಾವೇನು ಭಿಕ್ಷೆ ಅಥವಾ ಅವರ ಮನೆಯ ದುಡ್ಡನ್ನು ಕೇಳಿದ್ದಾ? ನಾವು ರಾಜ್ಯದ ಜನರಿಗಾಗಿ ಪರಿಹಾರ ಕೇಳಿದ್ದೇವೆ. ಇಲ್ಲಿಯವರೆಗೆ ನಮ್ಮ ಕೈಲಾದ ಅನುದಾನ ನಾವು ಕೊಟ್ಟಿದ್ದೇವೆ. ಕರ್ನಾಟಕದ ಜನರಿಗೆ ನಿಮ್ಮ ಭಿಕ್ಷೆ ಬೇಡ. ನಮ್ಮ ಹಕ್ಕನ್ನು ನಮಗೆ ಕೊಡಿ ಎಂದು ಅವರು ವಾಗ್ದಾಳಿ ನಡೆಸಿದರು.