ಹೃದಯಾಘಾತ ಎಂದರೆ, ಹೃದಯಕ್ಕೆ ಲಭಿಸಬೇಕಾಗಿರುವ ರಕ್ತದ ಪೂರೈಕೆ ಆಗದೇ ಸ್ತಬ್ಧಗೊಳ್ಳುವ ಕ್ರಿಯೆ. ಅದರೆ, ಇದು ಸಂಭವಿಸುವ ಮುನ್ನ ದೇಹ ಕೆಲವಾರು ಸೂಚನೆಗಳನ್ನು ನೀಡುತ್ತದೆ. ಈ ಸೂಚನೆಗಳನ್ನು ಅರಿತಿದ್ದರೆ ಈ ಆಘಾತದಿಂದ ರಕ್ಷಿಸಿಕೊಳ್ಳುವ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.
ಎದೆಯ ಭಾಗದಲ್ಲಿ ಅಸಹಜತೆ ಅಥವಾ ನೋವು:-
ಇದು ಹೃದಯದ ತೊಂದರೆ ಇರುವ ಬಗ್ಗೆ ದೇಹ ಪ್ರಕಟಿಸುವ ಅತಿ ಸಾಮಾನ್ಯವಾದ ಲಕ್ಷಣವಾಗಿದೆ. ಈ ನೋವನ್ನು ಸಾಮಾನ್ಯವಾಗಿ ಎದೆಯ ನಡುಭಾಗ ಅಥವಾ ಎಡಭಾಗದಲ್ಲಿ ಭಾರ ಇದ್ದ ಹಾಗೆ, ಕಿವುಚಿದ ಹಾಗೆ ಅಥವಾ ಒಳಗೆ ತುಂಬಿಕೊಂಡ ಹಾಗೆ ಇರುತ್ತದೆ ಎಂದು ರೋಗಿಗಳು ವಿವರಿಸಬಹುದು. ಈ ಅನುಭವ ಕೆಲವು ನಿಮಿಷಗಳವರೆಗೆ ಮಾತ್ರವೇ ಇದ್ದು ನಂತರ ಸಾಮಾನ್ಯವಾಗುತ್ತದೆ. ಕೆಲವೊಮ್ಮೆ ಒಂದೆರಡು ಬಾರಿ ಹೀಗೆ ಬಂದೂ ಹೋಗಬಹುದು.
ಹೃದಯಾಘಾತದ ಪ್ರಾರಂಭಿಕ ಅಥವಾ ಕಡೆಯ ಹಂತದಲ್ಲಿ ಅಸಾಮಾನ್ಯವಾದ ಸುಸ್ತು ಕಾಣಿಸಿಕೊಳ್ಳಬಹುದು. ಇದುವರೆಗೂ ಮಾಡಿಕೊಂಡು ಬಂದಿದ್ದ ಸರಳ ಕೆಲಸಗಳನ್ನು ಈಗ ಮಾಡಿದ ಬಳಿಕ ಥಟ್ಟನೇ ಸುಸ್ತು ಆವರಿಸಬಹುದು.
ಉಸಿರು ತೆಗೆದುಕೊಳ್ಳಲು ಕಷ್ಟವಾಗುವುದು
ವಿಶ್ರಾಂತ ಸ್ಥಿತಿಯಲ್ಲಿದ್ದಾಗಲೂ ಉಸಿರಾಡಲು ಕಷ್ಟಕರವಾಗುವುದು ಅಥವಾ ಕೊಂಚವೇ ಶ್ರಮದ ಕೆಲಸ ಮಾಡಿದರೂ ಅತಿ ಕಷ್ಟದಿಂದ ಉಸಿರಾಡಬೇಕಾಗಿ ಬರಬಹುದು.
ನಿದ್ದೆ ಸರಿಯಾಗಿ ಬಾರದೇ ಇರುವುದು:-
ಕೆಲವು ರೋಗಿಗಳಲ್ಲಿ ನಿದ್ದೆ ಸರಿಯಾಗಿ ಬಾರದಿರುವುದು, ತಡೆ ತಡೆದು ಬರುವುದು ಅಥವಾ ನಿದ್ದೆ ಬಂದಿದ್ದರೂ ಕೊಂಚ ಹೊತ್ತಿಗೇ ಎಚ್ಚರಾಗುವುದು ಮೊದಲಾದವು ಹೃದಯಾಘಾತದ ಮುನ್ಸೂಚನೆಗಳಾಗಿವೆ.
ಅಜೀರ್ಣತೆ, ವಾಕರಿಕೆ, ಅಥವಾ ಹಸಿವಿಲ್ಲದಿರುವಿಕೆ
ಈ ಲಕ್ಷಣಗಳು, ವಿಶೇಷವಾಗಿ ಮಹಿಳೆಯರಲ್ಲಿ ಕಂಡುಬಂದಾಗ, ಇದನ್ನು ಹೊಟ್ಟೆಯ ಹುಣ್ಣು ಅಥವ ಎದೆಯುರಿಯ ಕಾರಣದಿಂದ ಬಂದಿರಬಹುದು ಎಂದು ತಪ್ಪಾಗಿ ಅರ್ಥೈಸಿಕೊಳ್ಳಬಹುದು.
ಉದ್ವೇಗ
ಸಕಾರಣವಿಲ್ಲದೇ ಉದ್ವೇಗಕ್ಕೆ ಒಳಗಾಗುವುದು ಹಾಗೂ ಒಬ್ಬಂಟಿಯಾದ ಭಾವನೆಗಳನ್ನು ಪ್ರಕಟಿಸುವುದು ಕೂಡಾ ಹೃದಯಾಘಾತದ ಮುನ್ಸೂಚನೆ ಇರಬಹುದು
ಮಹಿಳೆಯರಲ್ಲಿ ಗಮನಿಸಬೇಕಾದ ಹೆಚ್ಚುವರಿ ಲಕ್ಷಣಗಳು
ಹೃದಯಾಘಾತ ಸಂಭವಿಸುವ ಕೆಲವು ದಿನಗಳ ಮುನ್ನ ಮಹಿಳೆಯರಲ್ಲಿ ಕೊಂಚ ಭಿನ್ನವಾದ ಲಕ್ಷಣಗಳು ಕಾಣಬರಬಹುದು. ಮೇಲಿನ ಲಕ್ಷಣಗಳ ಹೊರತಾಗಿ ಮಹಿಳೆಯರಲ್ಲಿ ಈ ಕೆಳಗಿನ ಲಕ್ಷಣಗಳು ಕಾಣಬರಬಹುದು.
ಕುತ್ತಿಗೆ, ದವಡೆ, ಭುಜ, ಬೆನ್ನಿನ ಮೇಲ್ಭಾಗ ಅಥವಾ ಕೆಳಹೊಟ್ಟೆಯ ಭಾಗದಲ್ಲಿ ಅಸಹಜತೆ
ಮಹಿಳೆಯರು ಈ ಅನುಭವವನ್ನು ತೀಕ್ಷ್ಣವಾದ ನೋವು ಅಥವಾ ಉರಿ ಆಗುತ್ತಿದೆ ಎಂದು ವಿವರಿಸಬಹುದು. ಕುತ್ತಿಗೆ, ದವಡೆ, ಭುಜ, ಬೆನ್ನಿನ ಮೇಲ್ಭಾಗ ಅಥವಾ ಕೆಳಹೊಟ್ಟೆಯ ನೋವು ಆಗಾಗ ಮರುಕಳಿಸಬಹುದು
ತಲೆ ತಿರುಗುವಿಕೆ ಅಥವಾ ಹಗುರಾಗಿರುವಂತಹ ಭಾವನೆ
ಯಾವುದೇ ಸ್ಪಷ್ಟ ಅಥವಾ ನಿರ್ದಿಷ್ಟ ಕಾರಣವಿಲ್ಲದೇ ತಲೆ ತಿರುಗುವ, ತೇಲಾಡುತ್ತಿರುವಂತಹ ಭಾವನೆ ಕಾಣಿಸಿಕೊಳ್ಳಬಹುದು. ಇದು ಕೂಡಾ ಹೃದಯಾಘಾತದ ಮುನ್ಸೂಚನೆಯಾಗಿದೆ.
ಮುಖ್ಯವಾಗಿ ಪರಿಗಣಿಸಬೇಕಾದ ವಿಷಯಗಳು:-
ಪ್ರತಿ ವ್ಯಕ್ತಿಯಲ್ಲಿಯೂ ಈ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳಬೇಕೆಂದೇನೂ ಇಲ್ಲ. ಇದ್ದರೂ ತೀವ್ರತೆಯಲ್ಲಿ ಬದಲಾವಣೆ ಇರಬಹುದು. ಕೆಲವರಿಗೆ ನೋವು ಚಿಕ್ಕದಾಗಿ ಇರಬಹುದು, ಉಳಿದವರಿಗೆ ತೀವ್ರವಾಗಿ ಇರಬಹುದು. ಕೆಲವರಲ್ಲಿ ಯಾವುದೇ ಲಕ್ಷಣಗಳೇ ಇಲ್ಲದಿರಬಹುದು. ನೋವು ತೀಕ್ಷ್ಣವಾಗಿಲ್ಲದೇ ಇದ್ದರೆ ಇದು ಹೃದಯಕ್ಕೆ ಸಂಬಂಧಿಸಿಲ್ಲ ಎಂದು ಅರ್ಥವಲ್ಲ. ಸದ್ದಿಲ್ಲದೇ ಎದುರಾಗುವ ಹೃದಯಾಘಾತ: ಕೆಲವರಿಗೆ ಯಾವುದೇ ಲಕ್ಷಣವೇ ಇಲ್ಲದಂತಹ ಹೃದಯಾಘಾತ ಎದುರಾಗುತ್ತದೆ. ಮಧುಮೇಹಿಗಳು ಈ ಬಗೆಯ ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು.