ಬೆಂಗಳೂರು : ಬರಗಾಲದಿಂದ ಬಳಲಿದ ರಾಜ್ಯದ ಜನತೆಗೆ 3,454 ಕೋಟಿ ರೂ. ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನೀಡಿದ್ದು, ಇದರಲ್ಲಿ ಕಾಂಗ್ರೆಸ್ ಸರ್ಕಾರದ ಯಾವುದೇ ಪಾತ್ರವಿಲ್ಲ. ಈಗ ರಾಜ್ಯ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರ ನೀಡಿದಂತೆಯೇ ಡಬಲ್ ಪರಿಹಾರ ನೀಡಲಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಜಾನೆ ಖಾಲಿಯಾಗಿರುವುದರಿಂದ ಸಿಎಂ ಸಿದ್ದರಾಮಯ್ಯ ಸರ್ಕಾರದ ಬಳಿ ಹಣವಿಲ್ಲ ಎಂಬುದು ಜಗಜ್ಜಾಹೀರಾಗಿದೆ. ಬರಗಾಲದ ಪರಿಹಾರಕ್ಕಾಗಿ ಸರಿಯಾದ ಮಾಹಿತಿ ನೀಡಲು ಕೂಡ ಸರ್ಕಾರ ವಿಳಂಬ ಮಾಡಿತ್ತು. ಕೋರ್ಟ್ ಆದೇಶವಾಗಿದ್ದರೆ ಕರ್ನಾಟಕಕ್ಕೆ ಮಾತ್ರ ಪರಿಹಾರ ಬರಬೇಕಿತ್ತು. ಆದರೆ ಕೇಂದ್ರ ಸರ್ಕಾರವೇ ಕ್ರಮ ವಹಿಸಿ ಪರಿಹಾರ ನೀಡಿದೆ. ಇದರಲ್ಲಿ ಕಾಂಗ್ರೆಸ್ ನ ಶ್ರಮ ಏನೂ ಇಲ್ಲ. ಚುನಾವಣಾ ಆಯೋಗ ಅನುಮತಿ ನೀಡಿರುವುದರಿಂದ ಮಾತ್ರ ಹಣ ಬಿಡುಗಡೆಯಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರ ಬರಗಾಲದ ಪರಿಹಾರದ ಹಣವನ್ನು ಲೂಟಿ ಮಾಡಬಾರದು. ಇದರಲ್ಲೂ ಕೈ ಚಳಕ ಮಾಡಿ ದುಡ್ಡು ಹೊಡೆಯದಂತೆ ನಾವು ಕಾವಲು ಕಾಯುತ್ತೇವೆ. ಬರದಿಂದ ನೊಂದ ರೈತರ ಖಾತೆಗೆ ನೇರವಾಗಿ ಪರಿಹಾರ ನೀಡಬೇಕು. ಈವರೆಗೆ ಬರ ಪರಿಹಾರ ಬಂದಿಲ್ಲ ಎಂದು ಕಾಂಗ್ರೆಸ್ ಹೇಳುತ್ತಿತ್ತು. ಹಿಂದಿನ ಬಿಜೆಪಿ ಸರ್ಕಾರ ದುಪ್ಪಟ್ಟು ಪ್ರವಾಹ ಪರಿಹಾರ ನೀಡಿತ್ತು. ಈಗಲೂ ಸರ್ಕಾರ ತನ್ನ ಕಡೆಯಿಂದ ಡಬಲ್ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.