ಮುಂಬೈ: ಮುಂಬೈ ದಾಳಿಯ ಉಗ್ರ ಅಜ್ಮಲ್ ಕಸಬ್ʼನನ್ನು (Ujjwal Nikam) ಗಲ್ಲಿಗೇರಿಸಲು ವಾದ ಮಂಡಿಸಿದ್ದ ವಕೀಲ ಉಜ್ವಲ್ ನಿಕಮ್ಗೆ ಬಿಜೆಪಿ ಟಿಕೆಟ್ ನೀಡಿದೆ. ಲೋಕಸಭಾ ಚುನಾವಣೆಗೆ ಮುಂಬೈ ನಾರ್ತ್ ಸೆಂಟ್ರಲ್ (Mumbai North Central) ಕ್ಷೇತ್ರದಿಂದ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ಕಣಕ್ಕಿಳಿಯಲಿದ್ದಾರೆ. ಆದರೆ ಹಾಲಿ ಸಂಸದೆ ಪೂನಂ ಮಹಾಜನ್ ಅವರಿಗೆ ಪಕ್ಷ ಕೊಕ್ ನೀಡಿದೆ.
ಕಾಂಗ್ರೆಸ್ ವರ್ಷಾ ಗಾಯಕ್ವಾಡ್ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸಿದ 48 ಗಂಟೆಗಳ ನಂತರ ಬಿಜೆಪಿ ಯಿಂದ ನಿರ್ಧಾರ ಹೊರಬಿದ್ದಿದೆ. ಹಾಲಿ ಸಂಸದೆ ಪೂನಂ ಮಹಾಜನ್ ಅವರ ವಿರುದ್ಧ ಪಕ್ಷದಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಮರಾಠಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಪಕ್ಷಕ್ಕೆ ಮತ್ತೊಂದು ಸವಾಲಾಗಿತ್ತು. ಈಗಾಗಲೇ ಮುಂಬೈ ಉತ್ತರ ಮತ್ತು ಮುಂಬೈ ಪೂರ್ವ ಸ್ಥಾನಗಳಿಗೆ ಕ್ರಮವಾಗಿ ಮರಾಠಿಯೇತರ ಪಿಯೂಷ್ ಗೋಯಲ್ ಮತ್ತು ಮಿಹಿರ್ ಕೋಟೆಚಾ ಅವರ ಹೆಸರನ್ನು ಘೋಷಿಸಿತ್ತು.
ದಿವಂಗತ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಪ್ರಮೋದ್ ಮಹಾಜನ್ ಅವರ ಪುತ್ರಿ ಪೂನಂ ಮಹಾಜನ್ ಅವರು 2014 ರಲ್ಲಿ ಚುನಾವಣೆಯಲ್ಲಿ ಗೆದ್ದು ಸಂಸತ್ ಪ್ರವೇಶಿಸಿದ್ದರು. ಈಗ ಅವರಿಗೆ ಪಕ್ಷ ಟಿಕೆಟ್ ನೀಡಿಲ್ಲ. ಬದಲಿಗೆ ಉಜ್ವಲ್ ಅವರನ್ನು ಕಣಕ್ಕಿಳಿಸಿದೆ. ಮುಂಬೈ ಉತ್ತರ ಕೇಂದ್ರ ಸ್ಥಾನಕ್ಕೆ ಮೇ 20 ರಂದು ಮತದಾನ ನಡೆಯಲಿದೆ. ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಆರು ವಿಧಾನಸಭಾ ಕ್ಷೇತ್ರಗಳು ಒಳಪಡಲಿವೆ.