ಆನೇಕಲ್: ಅದು 7 ವರ್ಷಗಳಿಗೊಮ್ಮೆ ಜರುಗುವ ಅಷ್ಟ ಗ್ರಾಮಗಳ ಐತಿಹಾಸಿಕ ಜಾತ್ರೆ. ಆ ಜಾತ್ರೆಯಲ್ಲಿ ಸುತ್ತಮುತ್ತಲ ಹಳ್ಳಿಗಳಿಂದ ತೇರುಗಳನ್ನು ಹೊಲ ಗದ್ದೆಗಳಲ್ಲಿ ಎತ್ತುಗಳ ಮೂಲಕ ಎಳೆದು ತರುವುದು ವಿಶೇಷ ಆಕರ್ಷಣೆ. ಅದನ್ನು ಕಣ್ತುಂಬಿಕೊಳ್ಳಲು ಅಸಂಖ್ಯಾತ ಭಕ್ತ ಸಮೂಹವೇ ಅಲ್ಲಿಗೆ ಹರಿದು ಬರುತ್ತದೆ. ಎಲ್ಲಿ ಅಂತೀರಾ…….? ಈ ಸ್ಟೋರಿ ನೋಡಿ……
ಎತ್ತ ನೋಡಿದ್ರು ಜನಸಾಗರ, ಮಂಗಳ ವಾಧ್ಯಗಳ ಕಲರವ. ಸಾಲುಗಟ್ಟಿ ನಿಂತ ಎತ್ತುಗಳು ಹೊಲಗದ್ದೆಗಳ ತಗ್ಗು, ದಿಬ್ಬಗಳನ್ನು ಲೆಕ್ಕಿಸದೆ ಆಕಾಶದೆತ್ತರದ ತೇರುಗಳನ್ನು ಎಳೆಯುತ್ತಿರುವುದು. ಈ ಎಲ್ಲಾ ದೃಶ್ಯಗಳು ಕಂಡುಬಂದದ್ದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮರಸೂರು ಮಡಿವಾಳ ಗ್ರಾಮದಲ್ಲಿ. ಹೌದು ಇಲ್ಲಿ 5 ಅಥವಾ 7 ವರ್ಷಕ್ಕೊಮ್ಮೆ ಗ್ರಾಮದೇವತೆ ಬಂಡಿ ಮಹಾಕಾಳಿ ಮತ್ತು ಸೋಮೇಶ್ವರ ಸ್ವಾಮಿ ಜಾತ್ರೆ ನಡೆಯುತ್ತದೆ. ಈ ಜಾತ್ರೆಯಲ್ಲಿ ಮರಸೂರು, ಶೆಟ್ಟಿಹಳ್ಳಿ ಮತ್ತು ಹಳೇವೂರು ಗ್ರಾಮಗಳಿಂದ ಸುಮಾರು 80 ಅಡಿ ಎತ್ತರದ ತೇರುಗಳನ್ನು ಎತ್ತುಗಳ ಸಹಾಯದಿಂದ ಎಳೆದು ತರುತ್ತಾರೆ. ಈ ಜಾತ್ರೆಯನ್ನು ನೋಡಲು ಸುತ್ತಮುತ್ತ ಹಳ್ಳಿಗಳು ಸೇರಿದಂತೆ ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ. ಬಂಡಿ ಮಹಾಕಾಳಿ ಶಕ್ತಿ ದೇವತೆಯಾಗಿದ್ದು, ಕೇಳಿದ ವರ ಕೊಡುವ ಮಹಾತಾಯಿ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.
ಇನ್ನು ಬಂಡಿ ಮಹಾಕಾಳಿ ದುರ್ಗಿ ಪಾರ್ವತಿ ದೇವಿಯ ಅಪರಾವತಾರವಾಗಿ ಇಲ್ಲಿ ಪೂಜಿಸಲ್ಪಡುತ್ತಾಳೆ. ಹೊಲಗದ್ದೆಗಳ ತಗ್ಗು ದಿಬ್ಬಗಳನ್ನು ಲೆಕ್ಕಿಸದೇ ಎತ್ತುಗಳು ತೇರುಗಳನ್ನು ಎಳೆದುಕೊಂಡು ಬರುತ್ತವೆ. ಆದ್ರೆ ಯಾರೋಬ್ಬರಿಗು ಸಣ್ಣ ಸಮಸ್ಯೆಯಾಗದೇ ದೇವಾಲಯದ ಬಳಿ ಸುತ್ತಮುತ್ತಲಿನ ತೇರು ಬಂದು ಸೇರುವುದೇ ದೇವಿಯ ಮಹಿಮೆಗೆ ಸಾಕ್ಷಿ. ಹಾಗಾಗಿ ಲಕ್ಷಾಂತರ ಮಂದಿ ದೇವಿಯನ್ನು ಕಣ್ತುಂಬಿಕೊಳ್ಳಲು ಜಾತ್ರೆಗೆ ಆಗಮಿಸುತ್ತಾರೆ. ನಾವು ಸಹ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸುವ ತೇರುಗಳನ್ನು ನೋಡಲು ಕಾತರದಿಂದ ಕಾಯುತ್ತಿರುವುದಾಗಿ ಭಕ್ತರು ಹರ್ಷ ವ್ಯಕ್ತಪಡಿಸಿದ್ದಾರೆ,