ಬೆಂಗಳೂರು: ಹಾಸನ ಪೆನ್ ಡ್ರೈವ್ ಪ್ರಕರಣದ ವರದಿಯನ್ನು ನಾಳೆಯೇ ಕೊಡಿ, ನಾಡಿದ್ದು ಕೊಡಿ ಎಂದು ದಿನ ನಿಗದಿಪಡಿಸಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದ ತಂಡ ಪ್ರಕರಣದ ತನಿಖೆಯನ್ನು ಕೈಗೊಂಡಿದೆ. ಪೆನ್ಡ್ರೈವ್ಗಳನ್ನು ವಶಪಡಿಸಿಕೊಂಡು ವೈಜ್ಞಾನಿಕ ವರದಿಗಾಗಿ ಎಫ್ಎಸ್ಎಲ್ಗೆ ರವಾನಿಸಲಿದ್ದಾರೆ. ಇದೇ ವೇಳೆ, ಸಾಕ್ಷಿಗಳ ಹೇಳಿಕೆಯನ್ನು ಪಡೆಯಲಿದ್ದಾರೆ ಎಂದರು.
ಎಸ್ಐಟಿ ತಂಡವು ಮುಕ್ತವಾಗಿ ಕೆಲಸ ಮಾಡಲಿದೆ. ಪ್ರಕರಣದ ವರದಿ ಸಲ್ಲಿಸಲು ಯಾವುದೇ ರೀತಿಯ ಸಮಯ ನಿಗದಿ ಮಾಡಲಾಗಿಲ್ಲ. ತನಿಖೆ ವಿಳಂಬವಾಗಬಾರದು ಎಂಬ ದೃಷ್ಟಿಯಿಂದ ತ್ವರಿತಗತಿಯಲ್ಲಿ ತನಿಖೆ ನಡೆಸುವಂತೆ ಮೌಖಿಕವಾಗಿ ತಿಳಿಸಲಾಗಿದೆ. ವರದಿಯನ್ನು ನಾಳೆಯೇ ಕೊಡಿ, ನಾಡಿದ್ದು ಕೊಡಿ ಎಂದು ದಿನ ನಿಗದಿಪಡಿಸಿಲ್ಲ ಎಂದು ಇದೇ ವೇಳೆ ಗೃಹ ಸಚಿವರು ಸ್ಪಷ್ಟಪಡಿಸಿದರು.
ಮಹಿಳಾ ಆಯೋಗವು ಬರೆದ ಪತ್ರದ ಆಧಾರದ ಮೇಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ದೂರುಗಳನ್ನು ಎಸ್ಐಟಿ ಪಡೆಯಲಿದೆ. ಸಂತ್ರಸ್ತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎಸ್ಐಟಿ ಕೆಲಸ ಮಾಡಲಿದೆ. ಸಂತ್ರಸ್ತರಿಗೆ ಜೀವ ಭಯವಿದ್ದರೆ ಪೊಲೀಸ್ ಭದ್ರತೆ ನೀಡಲಾಗುವುದು ಎಂದು ಇದೇ ವೇಳೆ ತಿಳಿಸಿದರು