ಬೆಂಗಳೂರು: ಹಾಸನ ಪ್ರಕರಣದ ವಿರುದ್ಧ ಪ್ರತಿಭಟನೆ ನಡೆಸುವ ಭರದಲ್ಲಿ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರ ಗೌರವಕ್ಕೆ ಧಕ್ಕೆ ಉಂಟು ಮಾಡಿರುವ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿ ಕ್ರಮ ಜರುಗಿಸಬೇಕು ಎಂದು ಜೆಡಿಎಸ್ ಪಕ್ಷವು ಪೋಲೀಸ್ ಆಯುಕ್ತರಿಗೆ ದೂರು ನೀಡಿದೆ. ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯರು ಹಾಗೂ ಪಕ್ಷದ ಮಾಧ್ಯಮ ವಿಭಾಗದ ಮುಖ್ಯಸ್ಥರಾದ ಕೆ.ಟಿ.ಶ್ರೀಕಂಠೇಗೌಡ, ಚೌಡರೆಡ್ಡಿ ತೂಪಲ್ಲಿ ಅವರ ನೇತೃತ್ವದ ನಿಯೋಗ ಪೊಲೀಸ್ ಆಯುಕ್ತ ದಯಾನಂದ್ ಅವರಿಗೆ ದೂರು ನೀಡಿದೆ.
ಹಾಸನ ಜಿಲ್ಲೆಯಲ್ಲಿ ನಡೆದಿರುವ ಪ್ರಕರಣಕ್ಕೆ ಸಂಬಂಧಪಟ್ಟು ಕಾಂಗ್ರೆಸ್ ಕಾರ್ಯಕರ್ತರು ಎನ್ನಲಾದ ಕೆಲ ಪುರುಷ, ಮಹಿಳೆಯರು ಬೆಂಗಳೂರಿನಲ್ಲಿ ಭಾನುವಾರ (28-4-2024) ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಬಳಿ ಪ್ರತಿಭಟನೆ ನಡೆಸಿರುವುದು ಸರಿಯಷ್ಟೇ. ಈ ಪ್ರಕರಣದ ಬಗ್ಗೆ ಅವರು ಪ್ರತಿಭಟನೆ ಮಾಡುವ ವಿಚಾರದ ಬಗ್ಗೆ ನಮ್ಮ ಪಕ್ಷಕ್ಕೆ ಯಾವುದೇ ತಕರಾರು, ಆಕ್ಷೇಪ ಇರುವುದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪುರುಷರು, ಮಹಿಳೆಯರು ಜನತಾದಳ (ಜಾತ್ಯತೀತ) ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನಮಂತ್ರಿಗಳೂ ಆಗಿರುವ ಹೆಚ್.ಡಿ.ದೇವೇಗೌಡ ಅವರು ಹಾಗೂ ಕರ್ನಾಟಕ ಪ್ರದೇಶ ಜನತಾದಳ ಅಧ್ಯಕ್ಷರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಪ್ರತಿಭಟನೆ ಮಾಡುವ ಭರದಲ್ಲಿ ಅತ್ಯಂತ ಅಪಮಾನಕರವಾಗಿ, ಕೀಳಾಗಿ ವರ್ತಿಸಿರುತ್ತಾರೆ. ನಮ್ಮ ಪಕ್ಷದ ಇಬ್ಬರು ಗೌರವಾನ್ವಿತ ನಾಯಕರಿಗೆ ಅಪಮಾನ ಮಾಡಿದ್ದಾರೆ. ಅವರ ಗೌರವಕ್ಕೆ ಧಕ್ಕೆ ಉಂಟು ಮಾಡಿದ್ದಾರೆ. ಮುಖಕ್ಕೆ ನಾಯಕರಿಬ್ಬರ ಮುಖವಾಡ ಧರಿಸಿ ಚಾರಿತ್ರ್ಯಕ್ಕೆ ಅಪಚಾರ ಎಸಗಿರುತ್ತಾರೆ ಎಂದು ದೂರಲಾಗಿದೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಎಂಬ ವ್ಯಕ್ತಿ ಮುಂಚೂಣಿಯಲ್ಲಿ ನಿಂತು ಈ ಕೀಳು ಅಭಿರುಚಿಯ ಪ್ರತಿಭಟನೆ ಮಾಡಿಸಿರುತ್ತಾರೆ. ಅಪರಾಧ ಹಿನ್ನೆಲೆಯ, ಸಮಾಜದ ಶಾಂತಿ ಕದಡುವ ಮನಃಸ್ಥಿತಿಯ ಈ ವ್ಯಕ್ತಿ ಹಿಂದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಕೀಳು ಅಭಿರುಚಿಯ, ಅವರ ಚಾರಿತ್ರ್ಯಕ್ಕೆ ಧಕ್ಕೆ ಉಂಟು ಮಾಡುವ ಪೋಸ್ಟರ್ ಗಳನ್ನು ಗೋಡೆಗಳ ಮೇಲೆ ಅಂಟಿಸಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ. ಈ ಬಗ್ಗೆ ಪೊಲೀಸರಿಗೆ ದೂರನ್ನು ನೀಡಲಾಗಿತ್ತು ಎಂಬ ಅಂಶವನ್ನು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಮಹಿಳಾ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಜಿ.ಪದ್ಮಾವತಿ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಪುಷ್ಪಾ ಅಮರನಾಥ್ ಹಾಗೂ ಎಸ್.ಆನಂದ್, ಹೇಮರಾಜು, ಪ್ರಕಾಶ್, ಪರಿಸರ ರಾಮಕೃಷ್ಣ, ಉಮೇಶ್, ರಂಜಿತ್, ಚಂದ್ರಶೇಖರ್, ಚಿನ್ನಿ ಪ್ರಕಾಶ್, ಓಬಳೇಶ್, ಉಮಾಭಾಯಿ ಸೇರಿದಂತೆ ಹಲವಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾಜಿ ಪ್ರಧಾನಿಗಳು, ಮಾಜಿ ಮುಖ್ಯಮಂತ್ರಿಗಳ ಗೌರವಕ್ಕೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ವರ್ತಿಸುತ್ತಾರೆ. ಮಾಜಿ ಪ್ರಧಾನಿಗಳು, ಮಾಜಿ ಮುಖ್ಯಮಂತ್ರಿಗಳಿಗೆ ಚಪ್ಪಲಿ, ಪೊರಕೆ ತೋರಿಸಿ ಅಪಚಾರ ಎಸಗಿರುತ್ತಾರೆ ಎಂದು ಆರೋಪ ಮಾಡಲಾಗಿದೆ.
ಕಾನೂನು ಪ್ರಕಾರ ಇದು ಅಕ್ಷಮ್ಯ ಅಪರಾಧವಾಗಿದ್ದು, ಕೂಡಲೇ ಇಲ್ಲಿ ಉಲ್ಲೇಖಿಸಿರುವ ಎಲ್ಲಾ ಕಾರ್ಯಕರ್ತರು ಹಾಗೂ ಪ್ರತಿಭಟನೆಯಲ್ಲಿ ಭಾ ಗಿಯಾಗಿದ್ದ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಬೇಕು. ಅವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಪಕ್ಷ ಒತ್ತಾಯಿಸಿದೆ.ನಿಯೋಗದಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷ ಆರ್.ಪ್ರಕಾಶ್, ಪಕ್ಷದ ವಕ್ತಾರರಾದ ಗಂಗಾಧರ ಮೂರ್ತಿ, ಹೆಚ್.ಎನ್.ದೇವರಾಜು, ರಾಜೂ ಗೌಡ, ನಾಗೇಂದ್ರ ಪ್ರಸಾದ್ ಮೊದಲಾದವರು ಇದ್ದರು.