ಮುಂಬೈ: ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ನ ಮೊದಲ ಪಂದ್ಯದಲ್ಲಿ ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಡೆಲ್ಲಿ ಕ್ಯಾಪಿಟಲ್ಸ್ ಎದುರು ಹೀನಾಯ ಸೋಲು ಅನುಭವಿಸಿದೆ. ಪುರುಷರ ಐಪಿಎಲ್ನಲ್ಲಿ ಸಾಮಾನ್ಯವಾಗಿ ಮೊದಲ ಪಂದ್ಯವನ್ನು ಸೋಲುವ ಆರ್ಸಿಬಿ ತಂಡದ ಚಾಳಿಯನ್ನು ಇದೀಗ ಮಹಿಳಾ ತಂಡವು ಮುಂದುವರೆಸಿದೆ. ಹೌದು, ಇಲ್ಲಿನ ಬ್ರೆಬೋರ್ನ್ ಮೈದಾನದಲ್ಲಿ ನಡೆದ ಸೂಪರ್ ಸಂಡೇಯ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 234 ರನ್ಗಳ ಕಠಿಣ ಗುರಿ ಬೆನ್ನತ್ತಿದ ಆರ್ಸಿಬಿ ತಂಡವು ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್ಗೆ ನಾಯಕ ಸ್ಮೃತಿ ಮಂಧನಾ ಹಾಗೂ ಸೂಫಿ ಡಿವೈನ್ 4.2 ಓವರ್ಗಳಲ್ಲಿ 41 ರನ್ಗಳ ಜತೆಯಾಟವಾಡಿತು.
ಸೋಫಿ ಡಿವೈನ್ ಕೇವಲ 14 ರನ್ ಬಾರಿಸಿ ಶಫಾಲಿ ವರ್ಮಾ ಅವರ ಅದ್ಭುತ ಕ್ಯಾಚ್ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಇನ್ನು ಇದರ ಬೆನ್ನಲ್ಲೇ ಸ್ಮೃತಿ ಮಂಧನಾ ಕೂಡಾ ಅಲೈಸ್ ಕ್ಯಾಪ್ಸಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಸ್ಮೃತಿ ಮಂಧನಾ 23 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 35 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಆಸ್ಟ್ರೇಲಿಯಾ ಮೂಲದ ಎಲೈಸಿ ಪೆರ್ರಿ ಕೇವಲ 19 ಎಸೆತಗಳಲ್ಲಿ 5 ಬೌಂಡರಿ ಸಹಿತ 31 ರನ್ ಬಾರಿಸಿ ತಾರಾ ನೋರಿಸ್ಗೆ ವಿಕೆಟ್ ಒಪ್ಪಿಸಿದರು.
ಕೈಕೊಟ್ಟ ಮಧ್ಯಮ ಕ್ರಮಾಂಕ: ಅಗ್ರಕ್ರಮಾಂಕದ ಮೂವರು ಬ್ಯಾಟರ್ಗಳು ತಂಡಕ್ಕೆ ಉಪಯುಕ್ತ ರನ್ ಕಾಣಿಕೆ ನೀಡಿದರಾದರೂ, ಮಧ್ಯಮ ಕ್ರಮಾಂಕದಲ್ಲಿ ನಾಟಕೀಯ ಕುಸಿತ ಕಂಡಿತು. 89 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಆರ್ಸಿಬಿ ತನ್ನ ಖಾತೆಗೆ 7 ರನ್ ಸೇರಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು. ಯುಎಸ್ಎ ಮೂಲದ ತಾರಾ ನೋರಿಸ್ ತಾವೆಸೆದ ಮೊದಲ ಎರಡು ಓವರ್ನಲ್ಲಿ ತಲಾ 2 ವಿಕೆಟ್ ಕಬಳಿಸಿ ಆರ್ಸಿಬಿ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಕೊನೆಯಲ್ಲಿ ಹೀಥರ್ ನೈಟ್-ಮೆಘನ್ ಶುಟ್ ಹೋರಾಟ: ಕೇವಲ 96 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿದ್ದ ಆರ್ಸಿಬಿ ತಂಡಕ್ಕೆ 8ನೇ ವಿಕೆಟ್ಗೆ ಹೀಥರ್ ನೈಟ್ ಹಾಗೂ ಮೆಘನ್ ಶುಟ್ 56 ರನ್ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಕೊನೆಯಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿದ ಹೀಥರ್ ನೈಟ್ ಕೇವಲ 21 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 2 ಆಕರ್ಷಕ ಸಿಕ್ಸರ್ ಸಹಿತ 34 ರನ್ ಬಾರಿಸಿ ತಾರಾ ನೋರಿಸ್ಗೆ ಐದನೇ ಬಲಿಯಾದರು. ಇನ್ನು ಮೆಘನ್ ಶುಟ್ 22 ರನ್ ಬಾರಿಸಿ ಅಜೇಯರಾಗುಳಿದರು.