ಬಾಳೆಹಣ್ಣನ್ನು ಅತ್ಯಂತ ರುಚಿಕರವಾದ ಮತ್ತು ಪೌಷ್ಟಿಕಾಂಶಯುಕ್ತ ಹಣ್ಣು ಎಂದು ಪರಿಗಣಿಸಲಾಗಿದೆ. ಹೀಗಾಗಿಯೇ ಇದರಿಂದ ಸ್ಮೂಥಿ, ಸಲಾಡ್, ಚಿಪ್ಸ್, ಬೋಂಡಾ ಮೊದಲಾದ ಆಹಾರಗಳನ್ನು ತಯಾರಿಸಿ ತಿನ್ನುತ್ತಾರೆ. ಅಜೀರ್ಣ, ಮಲಬದ್ಧತೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಬಾಳೆಹಣ್ಣಿನ ಸೇವನೆ ರಾಮಬಾಣವಾಗಿದೆ. ಆದರೆ ಬಾಳೆಕಾಯಿ ಸೇವನೆ ಸಹ ಅಷ್ಟೇ ಒಳ್ಳೆಯದು ಅನ್ನೋದು ನಿಮಗೆ ಗೊತ್ತಾ ?
ಬಾಳೆಕಾಯಿ ವಿಟಮಿನ್ , ಖನಿಜ, ಪ್ರೋಟೀನ್ಗಳ ಮೂಲವಾಗಿದೆ ಎಂಬುದು ಅನೇಕ ಜನರಿಗೆ ತಿಳಿದಿಲ್ಲ. ಝೆನ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಡಯಟೀಷಿಯನ್ ಪ್ರಿಯಾ ಪಾಲನ್ ಹೇಳುವಂತೆ, ಬಾಳೆಕಾಯಿ ಸೇವನೆಯಿಂದ ತೂಕ ನಿರ್ವಹಣೆ, ಉತ್ತಮ ಹೃದಯ ಆರೋಗ್ಯ ಮತ್ತು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಒಡಬಹುದಾಗಿದೆ. ಹಾಗೆಂದು ಇದನ್ನು ಬಾಳೆಹಣ್ಣನ್ನು ತಿನ್ನುವಂತೆ ಹಸಿಯಾಗಿ ತಿನ್ನಬೇಕಾಗಿಲ್ಲ. ಬಾಳೆಕಾಯಿ ಪಲ್ಯ, ಸಾರು, ಬಜ್ಜಿ ಹೀಗೆ ವಿವಿಧ ರೂಪದಲ್ಲಿ ತಿನ್ನುವ ಬಾಳೆಕಾಯಿ ಸಹ ಆರೋಗ್ಯ (Health)ಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.
ಬಾಳೆಕಾಯಿಯ ಹಲವು ಪ್ರಯೋಜನಗಳು
ಕರುಳಿನ ಆರೋಗ್ಯಕ್ಕೆ ಉತ್ತಮ (Gut Friendly)
ಬಾಳೆಕಾಯಿ ಸೇವನೆ ಜೀರ್ಣಕ್ರಿಯೆಗೆ ಮುಖ್ಯವಾದ ಶಾರ್ಟ್ ಚೈನ್ ಫ್ಯಾಟಿ ಆಸಿಡ್ (SCFA) ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರಿಂದ ಕರುಳಿನ ಆರೋಗ್ಯ ಉತ್ತಮವಾಗಿರುತ್ತದೆ. ಹಸಿ ಬಾಳೆಕಾಯಿಯನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಕುದಿಸಿ ಕುಡಿಯುವುದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಹೃದಯದ ಆರೋಗ್ಯಕ್ಕೆ ಸಹಕಾರಿ (Heart healthy)
ಮಾಗಿದ ಬಾಳೆಹಣ್ಣಿನಂತೆಯೇ, ಹಸಿರು ಬಾಳೆಕಾಯಿಗಳು ಹೃದಯದ ಆರೋಗ್ಯಕ್ಕೆ ಸಹಕಾರಿ. ಬಾಳೆಕಾಯಿ ಪೊಟ್ಯಾಸಿಯಮ್ನ ಅತ್ಯುತ್ತಮ ಮೂಲವಾಗಿದೆ, ಇದು ಸ್ನಾಯುಗಳು ಸಂಕುಚಿತಗೊಳ್ಳಲು ಮತ್ತು ಹೃದಯವನ್ನು ನಿಯಮಿತವಾಗಿ ಬಡಿಯಲು ಸಹಾಯ ಮಾಡುವ ಪ್ರಮುಖ ಖನಿಜವಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ.
ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ (Lowers cholesterol)
ಹಸಿ ಬಾಳೆಕಾಯಿಯ ಹೆಚ್ಚಿನ ಫೈಬರ್ ಅಂಶವು ಕೊಲೆಸ್ಟ್ರಾಲ್ ಅನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಹಸಿ ಬಾಳೆಹಣ್ಣುಗಳು ಫೈಬರ್ನಲ್ಲಿ ಸಮೃದ್ಧವಾಗಿರುವ ಕಾರಣ ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯಕಾರಿಯಾಗಿದೆ. ಇದಲ್ಲದೆ, ನಿಯಮಿತವಾಗಿ ಸೇವಿಸಿದಾಗ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ. ಹಸಿ ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಇದ್ದು. ಇದು ಮೂತ್ರಪಿಂಡಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
ಹೆಚ್ಚು ತಿನ್ನುವುದನ್ನು ತಡೆಯುತ್ತದೆ (Curbs craving)
ಹಸಿ ಬಾಳೆ ಪೊಟ್ಯಾಸಿಯಮ್, ಮೆಗ್ನೀಸಿಯಮ್, ಮ್ಯಾಂಗನೀಸ್, ವಿಟಮಿನ್ ಬಿ6 ಮತ್ತು ವಿಟಮಿನ್ ಸಿಯಂತಹಾ ಪೋಷಕಾಂಶಗಳನ್ನು ಒಳಗೊಂಡಿದೆ. ಅವುಗಳು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿರುತ್ತವೆ. ಹೀಗಾಗಿ ಇದನ್ನು ತಿಂದರೆ ಬೇಗನೇ ಹಸಿವಾಗುವುದಿಲ್ಲ. ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ ಮತ್ತು ತೂಕವನ್ನು ನಿಯಂತ್ರಣದಲ್ಲಿಡುತ್ತದೆ.
ಮಧುಮೇಹ ಇರುವವರಿಗೆ ಒಳ್ಳೆಯದು (Great for Diabetes)
ಹಸಿರು ಮತ್ತು ಮಾಗಿದ ಬಾಳೆಹಣ್ಣುಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಹಸಿರು ಬಾಳೆಹಣ್ಣುಗಳಲ್ಲಿನ ಕಾರ್ಬೋಹೈಡ್ರೇಟ್ ಗಳು ಮುಖ್ಯವಾಗಿ ಪಿಷ್ಟದ ರೂಪದಲ್ಲಿರುತ್ತವೆ. ಹಣ್ಣಾಗುವ ಪ್ರಕ್ರಿಯೆಯಲ್ಲಿ ಇದು ಕ್ರಮೇಣ ಸಕ್ಕರೆಗೆ ತಿರುಗುತ್ತದೆ. ಅದಕ್ಕಾಗಿಯೇ ಹೆಚ್ಚಿನ ಜನರು ಮಾಗಿದ ಬಾಳೆಹಣ್ಣುಗಳನ್ನು ತಿನ್ನಲು ಬಯಸುತ್ತಾರೆ ಏಕೆಂದರೆ ಅವುಗಳು ಸಿಹಿಯಾಗಿರುತ್ತವೆ. ಆದರೆ ಬಾಳೆಕಾಯಿಯಲ್ಲಿ ಹಾಗಲ್ಲ. ಈ ಕಾರಣದಿಂದಾಗಿ, ಹಸಿರು ಬಾಳೆ ಮಧುಮೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ಹಸಿರು ಬಾಳೆಕಾಯಿಯಲ್ಲಿರುವ ಕಾರ್ಬೋಹೈಡ್ರೇಟ್ಗಳು ಮುಖ್ಯವಾಗಿ ಸಕ್ಕರೆಗಿಂತ ಹೆಚ್ಚಾಗಿ ಪಿಷ್ಟದಿಂದ ಬರುತ್ತವೆ. ಆದ್ದರಿಂದ ಅವು ಕಳಿತ ಬಾಳೆಹಣ್ಣುಗಳಿಗಿಂತ ಕಡಿಮೆ ಗ್ಲೈಸೆಮಿಕ್ ಸೂಚಿ (GI)ಯನ್ನು ಹೊಂದಿರುತ್ತವೆ. ಮಧುಮೇಹ ರೋಗಿಗಳಿಗೆ ಅವು ವರದಾನವಾಗಿವೆ. ಕಡಿಮೆ ಜಿಐ ಹೊಂದಿರುವ ಆಹಾರಗಳು ಶಿಫಾರಸು ಮಾಡಲಾದ ವ್ಯಾಪ್ತಿಯಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹೀಗಾಗಿ ಇನ್ಮುಂದೆ ಪ್ರತಿನಿತ್ಯ ಬಾಳೆಹಣ್ಣನ್ನು ತಿನ್ನೋ ಹಾಗೆಯೇ ಬಾಳೆಕಾಯಿ ಕೂಡಾ ತಿನ್ನೋದನ್ನು ಮರೀಬೇಡಿ.