ಮಹದೇವಪುರ:ಯಾವ ರೀತಿ ಸೂರ್ಯಚಂದ್ರ ಇರುವುದು ಸತ್ಯವೋ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಸತ್ಯ, ಯಾವುದೇ ದುಷ್ಟಶಕ್ತಿಗಳು ಅಡ್ಡ ಬಂದರು ತಡೆಯಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಿರುದ್ದ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಕ್ಷೇತ್ರದ ಕುಂದಲಹಳ್ಳಿ ಸಮೀಪ ಮೈದಾನದಲ್ಲಿ ಬೆಂಗಳೂರು ಕೇಂದ್ರ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ ಮಹಿಳಾ ಸಮಾವೇಶ ಉದ್ಘಾಟನೆ ಮಾಡಿ ನಂತರ ಮಾತನಾಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, 2014ವರೆಗೆ 10 ವರ್ಷ ಆಡಳಿತ ನಡೆಸಿದ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ, ದೇಶವನ್ನು ಭ್ರಷ್ಟಾಚಾರದ ಸುಳಿಗೆ ಸಿಲುಕಿಸಿದರು. ಸಾವಿರಾರು ಕೋಟಿ ಮೊತ್ತದ ಭ್ರಷ್ಟಾಚಾರ ನಡೆದಿತ್ತು, ಭ್ರಷ್ಟಾಚಾರದ ಕೂಸನ್ನು ಹುಟ್ಟಿಸಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ.
ಈಗ ಕಾಂಗ್ರೆಸ್ ನವರು ಭ್ರಷ್ಟಾಚಾರದ ಬಗ್ಗೆ ಬೊಬ್ಬೆ ಹೊಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರಿಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಕಾಂಗ್ರೆಸ್ ಪಕ್ಷದ ಸುಳ್ಳು ಆರೋಪಗಳಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಕಿಡಿಕಾರಿದರು.
ದೇಶದ ಅಭಿವೃದ್ಧಿಯ ಪಯಣದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು. ದೇಶದ ಮೊದಲ ಪ್ರಜೆ ಇವತ್ತು ಮಹಿಳೆ ಎಂದು ಹೇಳಲು ನಮಗೆ ಹೆಮ್ಮೆ ಇದೆ. ದೇಶಕ್ಕೆ ಹಲವು ವರ್ಷಗಳಿಂದ ಬಜೆಟ್ ಕೊಟ್ಟವರೂ ಮಹಿಳೆ ನಿರ್ಮಲಾ ಸೀತಾರಾಮನ್ ಎನ್ನಲು ಹೆಮ್ಮೆ ಪಡುಬೇಕು ಎಂದು ತಿಳಿಸಿದರು