ಬ್ರಿಟಿಷ್ ಪಾಕಿಸ್ತಾನಿ ಸ್ಕಾಟ್ಲೆಂಡ್ ಪ್ರಜೆ, ಪ್ರಥಮ ಸಚಿವ (ಪ್ರಧಾನಿ) ಹುದ್ದೆಗೆ ಏರಿದ ಮೊದಲ ಮುಸ್ಲಿಂ ಮುಖಂಡ ಹಂಝ ಯೂಸುಫ್ ಹದಿಮೂರು ತಿಂಗಳ ಬಳಿಕ ತಮ್ಮ ಹುದ್ದೆಗೆ ಭಾವನಾತ್ಮಕ ವಿದಾಯ ಹೇಳಿದರು. ಈ ವಾರ ತಮ್ಮ ಹಾಗೂ ಸರ್ಕಾರದ ವಿರುದ್ಧ ಮಂಡನೆಯಾಗಲಿರುವ ಎರಡು ಅವಿಶ್ವಾಸ ನಿರ್ಣಯಗಳ ಹಿನ್ನೆಲೆಯಲ್ಲಿ ಯೂಸುಫ್ ಈ ನಿರ್ಧಾರ ಕೈಗೊಂಡಿದ್ದಾರೆ.
ಯೂಸುಫ್ ಅವರ ಸ್ಕಾಟಿಷ್ ನ್ಯಾಷನಲಿಸ್ಟ್ ಪಾರ್ಟಿ (ಎಸ್ಎನ್ ಪಿ) ಪಕ್ಷ ಗ್ರೀನ್ಸ್ ಜತೆ ಹೊಂದಿದ್ದ ಅಧಿಕಾರ ಹಂಚಿಕೆ ಸಹಕಾರ ಒಪ್ಪಂದವನ್ನು ಕಳೆದ ಗುರುವಾರ ದಿಢೀರನೇ ಅಂತ್ಯಗೊಳಿಸಿದ ಹಿನ್ನೆಲೆಯಲ್ಲಿ ಟೋರೀಸ್ ಆಂಡ್ ಲೇಬರ್ ಈ ಅವಿಶ್ವಾಸ ನಿರ್ಣಯ ಮಂಡಿಸಲು ನಿರ್ಧರಿಸಿದ್ದರು. ಇದರಿಂದಾಗಿ ಎಸ್ಎನ್ ಪಿ ಅಲ್ಪಮತದ ಸರ್ಕಾರವಾಗಿ ಪರಿವರ್ತನೆಯಾಗಿತ್ತು.
“ಒಂದು ದಿನ ನನ್ನ ದೇಶವನ್ನು ಮುನ್ನಡೆಸುವ ಅವಕಾಶ ಸಿಗುತ್ತದೆ ಎಂದು ನಾನು ಕನಸಿನಲ್ಲೂ ಊಹಿಸಿರಲಿಲ್ಲ. ಇಂಥ ಯುವ ವಯಸ್ಸಿನಲ್ಲಿ ಸರ್ಕಾರವನ್ನು ಮುನ್ನಡೆಸುವಂಥ ರಾಜಕೀಯವಾಗಿ ಪ್ರಭಾವಿ ಹುದ್ದೆಯಲ್ಲಿ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಬ್ರಿಟನ್ ನಲ್ಲಿ ಬಹುಸಂಸ್ಕೃತಿ ಮನೋಭಾವ ಪತನವಾಗಿದೆ ಎಂದು ಕೂಗು ಹಾಕುವವರಿಗೆ ಇದು ತದ್ವಿರುದ್ಧ ಪುರಾವೆ ಎಂದು ನಾನು ಹೇಳಬಲ್ಲೆ” ಎಂದು 39 ವರ್ಷದ ಯೂಸಫ್ ವಿದಾಯ ಭಾಷಣದಲ್ಲಿ ಹೇಳಿದರು. 13 ತಿಂಗಳ ಹಿಂದೆ ಪ್ರಧಾನಿ ಹುದ್ದೆಗೆ ಏರಿದ ಮೊದಲ ಮುಸ್ಲಿಂ ಪ್ರಜೆ ಎನಿಸಿಕೊಂಡಿದ್ದರು.