ಭೋಜ್ಪುರಿ ನಟಿ ಅಮೃತಾ ಪಾಂಡೆ ಏಪ್ರಿಲ್ 27ರಂದು ಬಿಹಾರದ ಭಾಗಲ್ಪುರದಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ತನಿಖಾಧಿಕಾರಿಗಳು ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕವಾಗಿ ಊಹಿಸಿದ್ದಾರೆ. ಸಾವಿಗೂ ಮುನ್ನ ಅಮೃತಾ ವಾಟ್ಸಾಪ್ನಲ್ಲಿ ರಹಸ್ಯ ಸಂದೇಶವೊಂದನ್ನು ಹರಿಬಿಟ್ಟಿದ್ದು, ಸಾವಿನ ಸುತ್ತ ಅನುಮಾನದ ಹುತ್ತ ಸುತ್ತಿಕೊಂಡಿದೆ.
ನಟಿ ಅಮೃತಾ ಪಾಂಡೆ ಅವರ ಕುಟುಂಬ ಸದಸ್ಯರನ್ನು ಉಲ್ಲೇಖಿಸಿ ಪ್ರಕಟವಾಗಿರುವ ವರದಿಯಲ್ಲಿ, ಅಮೃತಾ ಭೋಜ್ಪುರಿ ಮತ್ತು ಹಿಂದಿ ಭಾಷೆಗಳ ಹಲವು ಸಿನಿಮಾಗಳು, ಶೋಗಳು, ವೆಬ್ ಸರಣಿಗಳು ಮತ್ತು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೋಗ್ಸರ್ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಫೋರೆನ್ಸಿಕ್ ಸೈನ್ಸ್ ಲ್ಯಾಬೋರೆಟರಿ (ಎಫ್ಎಸ್ಎಲ್) ಅಧಿಕಾರಿಗಳು ನಟಿಯ ಮೃತದೇಹ ಪತ್ತೆಯಾದ ಕೋಣೆಯನ್ನು ಪರಿಶೀಲಿಸಿದ್ದಾರೆ. ತನಿಖೆ ಸಲುವಾಗಿ ಸ್ಥಳದಿಂದ ಮೊಬೈಲ್ ಫೋನ್ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶವ ಪತ್ತೆಯಾದ ಸ್ಥಳದಲ್ಲಿ ಯಾವುದೇ ಸೂಸೈಡ್ ನೋಟ್ ಪತ್ತೆಯಾಗದಿದ್ದರೂ, ಆಕೆ ಸಾವಿಗೂ ಮುನ್ನ ಶೇರ್ ಮಾಡಿರೋ ವಾಟ್ಸಾಪ್ ಸ್ಟೇಟಸ್ ಅನ್ನು ತನಿಖೆಯಲ್ಲಿ ಮುಖ್ಯ ಅಂಶವನ್ನಾಗಿಟ್ಟುಕೊಂಡಿದ್ದಾರೆ. ಅದರಲ್ಲಿ, “ಅವನ/ಅವಳ ಜೀವನ ಎರಡು ದೋಣಿಗಳಲ್ಲಿ ಸಾಗುತ್ತಿತ್ತು. ನಾನು ನನ್ನದನ್ನು ಮುಳುಗಿಸುವ ಮೂಲಕ ಅವರ ಪ್ರಯಾಣವನ್ನು ಸುಲಭಗೊಳಿಸಿದೆ”. ಸೂಕ್ತ ಕೆಲಸ ಸಿಗದೆ ಅವರು ಖಿನ್ನತೆಗೆ ಒಳಗಾಗಿದ್ದು, ಆತಂಕದಲ್ಲಿದ್ದರು ಎಂದು ನಟಿಯ ಸಂಬಂಧಿಕರು ತಿಳಿಸಿದ್ದಾರೆ.