ಅನುಪಮಾ ಧಾರವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಇಂದು ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶದಲ್ಲಿನ ಅಭಿವೃದ್ಧಿಯಿಂದಾಗಿ ನಾನು ಬಿಜೆಪಿಗೆ ಸೇರಿದ್ದೇನೆ ಎಂದು ನಟಿ ಹೇಳಿದರು.
ಅಭಿವೃದ್ಧಿಯ ಈ ಮಹಾಯಜ್ಞವನ್ನು ನೋಡಿದಾಗ ನನಗೂ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಅನಿಸುತ್ತದೆ. ನಾನು ಏನೇ ಮಾಡಿದರೂ ಸರಿಯಾಗಿ, ಒಳ್ಳೆಯದನ್ನು ಮಾಡುವಂತೆ ನಿಮ್ಮೆಲ್ಲರ ಆಶೀರ್ವಾದ ಮತ್ತು ಬೆಂಬಲ ಬೇಕು ಎಂದು ಅವರು ಹೇಳಿದರು.
ಪಕ್ಷದ ಮುಖಂಡರಾದ ವಿನೋದ್ ತಾವ್ಡೆ ಮತ್ತು ಅನಿಲ್ ಬಲುನಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಮಾರ್ಚ್ನಲ್ಲಿ ರೂಪಾಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದರು, ಬಳಿಕ ಇದು ನನ್ನ ಜೀವನದ ಅತ್ಯಂತ ಸ್ಮರಣೀಯ ದಿನ, ಎಂದೂ ಮರೆಯಲು ಸಾಧ್ಯವಾಗದು, ಮೋದಿಯವರನ್ನು ಭೇಟಿಯಾಗುವ ಕನಸು ನನಸಾಯಿತು ಎಂದು ಬರೆದುಕೊಂಡಿದ್ದರು.
ಸಿನಿಮಾ ನಿರ್ದೇಶಕ ಅನಿಲ್ ಗಂಗೂಲಿ ಪುತ್ರಿ ರೂಪಾಲಿ ಗಂಗೂಲಿ ತನ್ನ ವೃತ್ತಿ ಜೀವನವನ್ನು 7ನೇ ವಯಸ್ಸಿನಲ್ಲಿ ಪ್ರಾರಂಭಿಸಿದರು. ಅವರು ತಮ್ಮ ತಂದೆಯ ಸಾಹೇಬ ಚಿತ್ರದಲ್ಲಿ ತಮ್ಮ ಮೊದಲ ಪಾತ್ರ ನಿರ್ವಹಿಸಿದರು. ಆದರೆ 2023ರಲ್ಲಿ ಬಂದ ಸಂಜೀವಿನಿ ಎ ಮೆಡಿಕಲ್ ಬೂನ್ ಧಾರಾವಾಹಿಯಿಂದ ರೂಪಾಳಿಗೆ ಮನ್ನಣೆ ಸಿಕ್ಕಿತ್ತು.
ನಟಿ ಬಿಗ್ಬಾಸ್ ಸೀಸನ್ 1ರಲ್ಲೂ ಭಾಗವಹಿಸಿದ್ದರು. ಸಾರಾಭಾಯ್ ವರ್ಸಸ್ ಸಾರಾಭಾಯ್ ನಂತಹ ಹಿಟ್ ಶೋಗಳಲ್ಲೂ ಭಾಗವಹಿಸಿದ್ದರು. 2013ರಲ್ಲಿ ಪರ್ವರಿಶ್ ಧಾರಾವಾಹಿ ಮಾಡಿದ ಬಳಿಕ 7 ವರ್ಷಗಳ ವಿರಾಮ ತೆಗೆದುಕೊಂಡಿದ್ದರು. ಬಳಿಕ ಅನುಪಮಾ ಮೂಲಕ ಕಿರುತೆರೆಗೆ ಬಂದರು. ಇದೀಗ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದು ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.