ಅಂಗಮಾಲಿ ಡೈರೀಸ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ಅನ್ನಾ ರಾಜನ್, ಇತ್ತೀಚೆಗೆ ಆವೇಶಂ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಿ ಸದ್ದು ಮಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ನಟಿ ಈ ವಿಡಿಯೋವನ್ನು ಹಂಚಿಕೊಂಡಿದ್ದರು.
ವಿಡಿಯೋ ಹಂಚಿಕೊಂಡ ನಟಿ, ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಎಲ್ಲ ಜನರಿಗೆ, ನಿಮ್ಮ ಕಾಳಜಿ ಮತ್ತು ವಿಶೇಷ ಪ್ರೀತಿಗೆ ಧನ್ಯವಾದ ಎಂದು ಹೇಳಿದ್ದ ಅನ್ನಾ, ಧಗಧಗಿಸುವ ಬಿಸಿಲಿನ ಕಾರಣಕ್ಕೆ, ಮನ ಬಿಚ್ಚಿ ಕುಣಿಯಲು ಸಾಧ್ಯವಾಗಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನನಗೆ ಡ್ಯಾನ್ಸ್ ಅಂದರೆ ಅಷ್ಟಕಷ್ಟೇ ಎಂದಿದ್ದರು. ಮುಂದಿನ ಬಾರಿ ಇನ್ನೂ ಚೆನ್ನಾಗಿ ತಮ್ಮ ನೃತ್ಯ ಕಲೆಯನ್ನ ಪ್ರದರ್ಶಿಸುವುದಾಗಿಯೂ ಹೇಳಿದ್ದರು.
ಅನ್ನಾ ಅವರನ್ನು ಸಾಕಷ್ಟು ಮಂದಿ ಟ್ರೋಲ್ ಮಾಡಿದ್ದಾರೆ.ಕುಣಿಯೋಕೆ ಬಾರದವರು ನೆಲ ಡೊಂಕು ಅಂದರಂತೆ, ಹಾಗಾಯಿತು ನಿಮ್ಮ ಕಥೆ ಅಂದಿದ್ದಾರೆ. ಇಷ್ಟ್ಯಾಕೇ ದಪ್ಪ ಆಗಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ದಪ್ಪ ಆಗುವುದು ಮಹಾ ಅಪರಾಧ ಎಂಬಂತೆ ಅನ್ನಾ ಅವರನ್ನ ಟೀಕಿಸಿದ್ದಾರೆ. ವ್ಯಂಗ್ಯ ಮಾಡಿದ್ದಾರೆ.
ಈ ಕಾಮೆಂಟ್ ಗಳನ್ನು ನೋಡಿ ಕುಗ್ಗಿ ಹೋಗಿರುವ ನಟಿ, ನನ್ನ ವಿಡಿಯೋ ನಿಮಗೆ ಇಷ್ಟವಾಗದೇ ಇದ್ದರೆ ನೇರವಾಗಿ ಹೇಳಿ ಅದನ್ನ ಬಿಟ್ಟು ಈ ತರಹ ಕಮೆಂಟ್ ಎಲ್ಲ ಮಾಡಬೇಡಿ ಎಂದಿದ್ದಾರೆ. ಇದರಿಂದ ನನಗೆ ನೋವುಂಟು ಆಗಿದೆ ಅಂದಿದ್ದಾರೆ. ನಾನು ಆಟೋಇಮ್ಯೂನ್ ಥೈರಾಯ್ಡ್ ಕಾಯಿಲೆಯ ವಿರುದ್ಧ ಹೋರಾಡುತ್ತಿದ್ದೇನೆ ದಯವಿಟ್ಟು ಅರ್ಥ ಮಾಡಿಕೊಳ್ಳಿ ಎಂದು ವಿನಂತಿಸಿಕೊಂಡಿದ್ದಾರೆ.
ಕೆಲವೊಮ್ಮೆ ನನ್ನ ದೇಹದಲ್ಲಿ ಊತ ಕಾಣುತ್ತೆ. ಮರು ದಿನ ಮತ್ತೆ ಸಹಜ ಸ್ಥಿತಿಗೆ ಮರಳಿರುತ್ತೆ ಎಂದಿರುವ ಅನ್ನಾ, ನಾನು ಕೀಲು ನೋವು ಮತ್ತು ಇತರ ರೋಗಲಕ್ಷಣಗಳಿಂದ ಬಳಲುತ್ತಿದ್ದೇನೆ. ಆದರೂ, ಕಳೆದ 2 ವರ್ಷಗಳಿಂದ ನನ್ನ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದೇನೆ ಎಂದಿದ್ದಾರೆ. ಈ ಜಗತ್ತಿಗೆ ನಾನು ಕೂಡ ಸೇರಿದವಳಾಗಿರುವುದರಿಂದ ಏನೂ ಮಾಡದೆ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ನಿಮಗೆ ಇಷ್ಟವಿಲ್ಲದಿದ್ದರೆ ನನ್ನ ಬಿಟ್ಟುಬಿಡಿ. ಆದರೆ ಈ ರೀತಿ ನೋವಾಗುವಂತೆ ಕಮೆಂಟ್ ಗಳನ್ನ ಮಾಡಬೇಡಿ ಎಂದು ವಿನಂತಿಸಿಕೊಂಡಿದ್ದಾರೆ.