ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಇತರ 20 ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಲೂಚಿಸ್ತಾನ ಪ್ರಾಂತ್ಯದ ದುಕ್ಕಿ ಜಿಲ್ಲೆಯಲ್ಲಿ ಕಲ್ಲಿದ್ದಲು ತುಂಬಿದ್ದ ಲಾರಿಯೊಂದು ನೆಲಬಾಂಬ್ಗೆ ಡಿಕ್ಕಿಯಾಗಿ ಮೊದಲ ಸ್ಫೋಟ ಸಂಭವಿಸಿದ್ದರೆ, ಸ್ಫೋಟದ ಸ್ಥಳದಲ್ಲಿ ಜನರು ಸೇರಿದಾಗ ದೂರ ನಿಯಂತ್ರಕ ಸಾಧನ ಬಳಸಿ ಎರಡನೇ ಸ್ಫೋಟ ನಡೆಸಿರುವುದಾಗಿ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ `ಕ್ಸಿನ್ಹುವಾ’ ಸುದ್ದಿಸಂಸ್ಥೆ ವರದಿ ಮಾಡಿದೆ.
ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿಗಳು ಹಾಗೂ ಗಣಿ ಕೆಲಸಗಾರರು ಸಾವನ್ನಪ್ಪಿದವರಲ್ಲಿ ಮತ್ತು ಗಾಯಗೊಂಡವರಲ್ಲಿ ಸೇರಿದ್ದಾರೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು, ಭದ್ರತಾ ಪಡೆಗಳು ಪ್ರದೇಶದಲ್ಲಿ ನಾಕಾಬಂದಿ ನಡೆಸಿದ್ದು ಶೋಧ ಕಾರ್ಯಾಚರಣೆ ಆರಂಭಗೊಂಡಿದೆ. ಯಾವುದೇ ಸಂಘಟನೆ ಸ್ಫೋಟದ ಹೊಣೆ ವಹಿಸಿಕೊಂಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.