ಮೂರನೇ ಹಂತದ ಮತದಾನಕ್ಕೂ ಮುನ್ನ ಜಾರ್ಖಂಡ್ನ ಪಲಮುವಿನ ಚಿಯಾಂಕಿ ಏರ್ಪೋರ್ಟ್ ಮೈದಾನದಲ್ಲಿ ನಡೆದ ಬಿಜೆಪಿ ಪಕ್ಷದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಭ್ಯರ್ಥಿ ಬಿಡಿ ರಾಮ್ ಪರವಾಗಿ ಮತ ಚಲಾಯಿಸುವಂತೆ ಜನರಲ್ಲಿ ಮನವಿ ಮಾಡಿದರು. ತಮ್ಮ ಭಾಷಣದಲ್ಲಿ ಅವರು ಭಾರತ ಒಕ್ಕೂಟವನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದರು.
ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಸರ್ಕಾರ ದುರ್ಬಲವಾಗಿದೆ, ಮತ್ತೊಮ್ಮೆ ದೇಶದಲ್ಲಿ ಬಲಿಷ್ಠ ಸರ್ಕಾರ ರಚಿಸಲು ಸಹಕಾರ ಮಾಡಿ ಎಂದು ಮನವಿ ಮಾಡಿದ ಪ್ರಧಾನಿ ಮೋದಿ, ನಿಮ್ಮ ಆಶೀರ್ವಾದದಿಂದ ನಾನು ಸಿಎಂ ಮತ್ತು ಪ್ರಧಾನಿಯಾಗಿ ದೇಶವಾಸಿಗಳಿಗೆ ಸೇವೆ ಸಲ್ಲಿಸಿ 25 ವರ್ಷಗಳು ತುಂಬಲಿವೆ. ಈ 25 ವರ್ಷಗಳಲ್ಲಿ ನಿಮ್ಮ ಆಶೀರ್ವಾದದಿಂದ ಮೋದಿ ಒಂದು ಪೈಸೆ ಹಗರಣದ ಆರೋಪವನ್ನೂ ತನ್ನ ಮೈಮೇಲೆ ಎಳೆದುಕೊಂಡಿಲ್ಲ. ಇವತ್ತಿಗೂ ಸ್ಥಾನ, ಪ್ರತಿಷ್ಠೆ, ಸುಖ, ಸಮೃದ್ಧಿಯಿಂದ ದೂರವಾಗಿ ನೀವು ನನ್ನನ್ನು ಇಲ್ಲಿಗೆ ಕಳುಹಿಸಿದಂತೆಯೇ ಇದ್ದೇನೆ. ಮೋದಿ ಹುಟ್ಟಿದ್ದು ಮೋಜಿಗಾಗಿ ಅಲ್ಲ, ಮಿಷನ್ಗಾಗಿ ಎಂದರು.