ವಾಷಿಂಗ್ಟನ್: ಯುನೈಟೆಡ್ ಏರ್ಲೈನ್ಸ್ ವಿಮಾನದಲ್ಲಿ ತುರ್ತು ನಿರ್ಗಮನದ ದ್ವಾರ ತೆರೆಯಲು ಪ್ರಯತ್ನಿಸಿದ ಪ್ರಯಾಣಿಕನನ್ನು ಪೊಲೀಸರು ಬಂಧಿಸಿದ್ದಾರೆ.
ಯುನೈಟೆಡ್ ಏರ್ಲೈನ್ಸ್ ವಿಮಾನವು ಲಾಸ್ ಏಂಜಲೀಸ್ನಿಂದ ಬೋಸ್ಟನ್ಗೆ ಹೊರಟಿತ್ತು. ಈ ವೇಳೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ತುರ್ತು ನಿರ್ಗಮನದ ದ್ವಾರ ತೆರೆಯಲು ಯತ್ನಿಸಿದ್ದು, ಇದೇ ವೇಳೆ ವಿಮಾನದ ಸಿಬ್ಬಂದಿ ಮೇಲೆ ಹಲ್ಲೆಗೂ ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕ ಟೊರೆಸ್ ಎಂಬಾತನನ್ನು ಬೋಸ್ಟನ್ ಲೋಗನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ವಿಮಾನದ ಲ್ಯಾಂಡಿಂಗ್ಗೆ 45 ನಿಮಿಷ ಇರುವಾಗ, ವಿಮಾನದ ಸಿಬ್ಬಂದಿಗೆ ಕಾಕ್ಪಿಟ್ನಲ್ಲಿ ಎಚ್ಚರಿಕೆಯ ಶಬ್ದ ಕೇಳಿಬಂದಿದೆ. ವಿಮಾನದ ಮೊದಲ ದರ್ಜೆ ಮತ್ತು ಕೋಚ್ ವಿಭಾಗಗಳ ನಡುವೆ ಇರುವ ಸ್ಟಾರ್ಬೋರ್ಡ್ ಬದಿಯ ಬಾಗಿಲನ್ನು ತೆಗೆಯಲು ಪ್ರಯಾಣಿಕ ಪ್ರಯತ್ನಿಸಿದ್ದನ್ನು ಗಗನಸಖಿ ಗಮನಿಸಿದ್ದು ಈ ವೇಳೇ ಆತನನ್ನು ತಡೆಯಲು ಯತ್ನಿಸಿದ್ದಾರೆ.
ವಿಚಾರವನ್ನು ಸಿಬ್ಬಂದಿ ಫ್ಲೈಟ್ ಅಟೆಂಡೆಂಟ್ ಕ್ಯಾಪ್ಟನ್ಗೆ ತಿಳಿಸಿದ್ದಾರೆ. ನಂತರ ಟೊರೆಸ್ನನ್ನು ಪ್ರಶ್ನಿಸಿದಾಗ, ಸಿಬ್ಬಂದಿ ಮೇಲೆಯೇ ಅಪಾಯಕಾರಿ ಆಯುಧ ಬಳಸಿ ಹಲ್ಲೆಗೆ ಮುಂದಾಗಿದ್ದಾನೆ. ಆತನನ್ನು ಪೊಲೀಸರ ವಶಕ್ಕೆ ನೀಡಲಾಯಿತು. ನ್ಯಾಯಾಲಯವು ಮಾ.9ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಅಲ್ಲಿಯವರೆಗೆ ಪ್ರಯಾಣಿಕ ಟೊರೆಸ್ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.