ಬಾಲಿವುಡ್ ನಟಿ ಕರೀನಾ ಕಪೂರ್ ಯುನಿಸೆಫ್ ಇಂಡಿಯಾದ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. 2014ರಿಂದ ಯುನಿಸೆಫ್ ಜೊತೆ ಉತ್ತಮ ನಂಟು ಹೊಂದಿರುವ ಕರೀನಾ ಇದೀಗ ರಾಯಭಾರಿಯಾಗಿ ಆಯ್ಕೆಯಾಗಿರುವ ಬಗ್ಗೆ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದು, ವಿಶೇಷ ಗೌರವದ ಬಗ್ಗೆ ನಟಿ ಸಂತಸ ವ್ಯಕ್ತಪಡಿಸಿದ್ದಾರೆ.
ನನಗೆ ಇದು ಭಾವನಾತ್ಮಕ ದಿನ. ನಾನು ಯುನಿಸೆಫ್ ಇಂಡಿಯಾ ರಾಯಭಾರಿಯಾಗಿ ನೇಮಕಗೊಂಡಿರುವುದಕ್ಕೆ ಗೌರವವಿದೆ. ಕಳೆದ 10 ವರ್ಷಗಳಲ್ಲಿ ಯುನಿಸೆಫ್ ಇಂಡಿಯಾ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ನಾನು ಆ ಕೆಲಸದ ಬಗ್ಗೆ ಹೆಮ್ಮೆಪಡುತ್ತೇನೆ. ಮಕ್ಕಳ ಹಕ್ಕುಗಳನ್ನು ಉತ್ತೇಜಿಸಲು ಮತ್ತು ರಕ್ಷಿಸಲು ಮತ್ತು ಎಲ್ಲಾ ಮಕ್ಕಳಿಗೆ ಸಮಾನ ಭವಿಷ್ಯಕ್ಕಾಗಿ ಧ್ವನಿಯಾಗಲು ಹೆಮ್ಮೆಯಾಗುತ್ತಿದೆ. ದೇಶದಾದ್ಯಂತ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳಿಗಾಗಿ ದಣಿವರಿಯದೇ ಶ್ರಮಿಸುತ್ತಿರುವ ಇಡೀ ತಂಡಕ್ಕೆ ವಿಶೇಷ ಧನ್ಯವಾದಗಳು ಎಂದು ನಟಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದಿಂದ ಕರೀನಾ ಕಪೂರ್ ಹೊರಬಂದಿದ್ದಾರೆ ಎನ್ನಲಾಗಿದೆ. ಡೇಟ್ಸ್ ಸಮಸ್ಯೆಯಿಂದ ಸಿನಿಮಾದಿಂದ ಹೊರ ಬಂದಿದ್ದು ಆ ಜಾಗಕ್ಕೆ ಇದೀಗ ನಯನತಾರಾ ಎಂಟ್ರಿಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಮಾಹಿತಿ ಹೊರ ಬಿದ್ದಿಲ್ಲ.