ಬೆಂಗಳೂರು: ಬೆಂಗಳೂರಿನ ಹೈಕೋರ್ಟ್ ಪೀಠವು, RSS ಕಾರ್ಯಕರ್ತನ ವಿರುದ್ಧ ದಾಖಲಾಗಿದ್ದ ಹಣ ವಸೂಲಿಗೆ ಧಮ್ಕಿ ಹಾಕಿದ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ. ಬಿಜೆಪಿ ಮುಖಂಡ ಬಿ.ಜೆ.ಪುಟ್ಟಸ್ವಾಮಿ ದಾಖಲಿಸಿರುವ ದೂರು ರದ್ದು ಮಾಡಬೇಕು ಎಂದು ಕೋರಿ ಹನುಮೇಗೌಡ ಎಂಬುವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯ ಪೀಠ ಅರ್ಜಿಯನ್ನು ಮಾನ್ಯ ಮಾಡಿದೆ. ಅಲ್ಲದೆ,
ಹಣ ವಸೂಲು ಮಾಡಲು ಬೆದರಿಸಿದ್ದಾನೆಂದು ಅರ್ಜಿದಾರರ ವಿರುದ್ಧ ಮಾಡಿರುವ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ತನ್ನ ಆದೇಶದಲ್ಲಿ ತಿಳಿಸಿದೆ. ಜತೆಗೆ, ಭಾರತೀಯ ಅಪರಾಧ ದಂಡ ಸಂಹಿತೆ ಸೆಕ್ಷನ್ 385ರಡಿ ಅಪರಾಧ ಎಸಗಿದ್ದರೆ ಆತ ಇತರೆ ಯಾವುದೇ ವ್ಯಕ್ತಿಯನ್ನು ಬೆದರಿಸಿ ಘಾಸಿಗೊಳಿಸಿರಬೇಕು. ಆದರೆ ಈ ಪ್ರಕರಣದಲ್ಲಿ ಆರೋಪಪಟ್ಟಿಯ ಜತೆ ಆರೋಪ ಸಾಬೀತುಪಡಿಸುವಂತಹ ಯಾವುದೇ ಸಾಕ್ಷ್ಯಧಾರಗಳು ಲಭ್ಯವಾಗಿಲ್ಲ. ಅಲ್ಲದೆ, ದೂರುದಾರರನ್ನು ಸುಲಿಗೆ ಮಾಡಲೆಂದು ಬೆದರಿಸಿರುವುದಕ್ಕೆ ಬಲವಾದ ಸಾಕ್ಷಿಗಳು ಇಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.