ಬೆಂಗಳೂರಿನ ಅತಿದೊಡ್ಡ ಚಿತ್ರಮಂದಿರಗಳಲ್ಲಿ ಒಂದಾಗಿದ್ದ ಸ್ಯಾಂಕಿ ರಸ್ತೆಯ ʻಕಾವೇರಿʼ ಚಿತ್ರಮಂದಿರ ಈಗ ಶಾಶ್ವತವಾಗಿ ಮುಚ್ಚಿದೆ. ಈ ಮೂಲಕ 21 ವರ್ಷದಲ್ಲಿ 6 ಥಿಯೇಟರ್ ಗಳು ಬಂದ್ ಆಗಿವೆ.
ಒಟಿಟಿ , ಮಲ್ಟಿಪ್ಲೆಕ್ ಇತ್ಯಾದಿ ಕಾರಣಗಳಿಂದ ಇತ್ತೀಚೆಗೆ ಚಿತ್ರಮಂದಿರಗಳತ್ತ ಜನ ಕಡಿಮೆ ಸಂಖ್ಯೆಯಲ್ಲಿ ಮುಖ ಮಾಡುತ್ತಿದ್ದಾರೆ . ಹೀಗಾಗಿ ಥಿಯೇಟರ್ ಮಾಲಿಕರು ತೊಂದರೆ ಅನುಭವಿಸುವಂತಾಗಿದೆ. ಇದೇ ಕಾರಣದಿಂದ ಹಲವು ಚಿತ್ರಮಂದಿರಗಳು ಮುಚ್ಚುವ ನಿರ್ಧಾರಕ್ಕೆ ಬಂದಿದೆ. ಇದೀಗ ಈ ಪಟ್ಟಿದೆ ಸ್ಯಾಂಕಿ ರಸ್ತೆಯ ʻಕಾವೇರಿʼ ಚಿತ್ರಮಂದಿರ ಕೂಡ ಸೇರಿದೆ. ಸುಮಾರು 50 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಕಾವೇರಿ ಚಿತ್ರ ಮಂದಿರ ಇದೀಗ ಶಾಶ್ವತವಾಗಿ ಮುಚ್ಚಲ್ಪಟ್ಟಿದೆ.
1974ರ ಜನವರಿ 11ರಂದು ಡಾ. ರಾಜ್ಕುಮಾರ್ ನಟನೆಯ ‘ಬಂಗಾರದ ಪಂಜರ’ ಸಿನಿಮಾ ಪ್ರದರ್ಶನದ ಮೂಲಕ ʻʻಕಾವೇರಿʼʼ ಚಿತ್ರಮಂದಿರ ಶುರುವಾಗಿತ್ತು. ಅಂದಿನಿಂದ ಇಲ್ಲಿಯವರೆಗೂ ಈ ಚಿತ್ರ ಮಂದಿರದಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ನಾನಾ ಭಾಷೆಯ ಚಿತ್ರಗಳು ತೆರೆಕಂಡಿದ್ದವು. ಈ ಚಿತ್ರಮಂದಿರದಲ್ಲಿ ಪುನೀತ್ ರಾಜ್ಕುಮಾರ್ ಅಭಿನಯದ ‘ಪರಮಾತ್ಮ’ ಸಿನಿಮಾದ ಆರಂಭಿಕ ಸೀನ್ ಅನ್ನು ಇಲ್ಲಿಯೇ ಶೂಟಿಂಗ್ ಮಾಡಲಾಗಿತ್ತು.
ಇನ್ನು ಕಳೆದ 2 ವರ್ಷದಲ್ಲೇ ಬೆಂಗಳೂರಿನ 6 ಪ್ರಮುಖ ಥಿಯೇಟರ್ ಗಳು ಬೀಗ ಹಾಕಿವೆ. ಮೈಸೂರು ರಸ್ತೆಯಲ್ಲಿರುವ ನಳಂದಾ, ಉಮಾ, ಕೃಷ್ಣ, ಮೆಜೆಸ್ಟಿಕ್ ನಲ್ಲಿರುವ ಮೂವಿಲ್ಯಾಂಡ್, ತುಳಸಿ ಥಿಯೇಟರ್ ಗಳು ಈ ಹಿಂದೆ ಬಾಗಿಲು ಹಾಕಿದ್ದವು. ಇದೀಗ ಈ ಪಟ್ಟಿಗೆ ಇದೀಗ ಕಾವೇರಿ ಚಿತ್ರ ಮಂದಿರ ಸೇರ್ಪಡೆಯಾಗಿದೆ.