ಇಸ್ರೇಲ್ ಹಾಗೂ ಹಮಾಸ್ ನಡುವೆ ನಡೆಯುತ್ತಿರುವ ಸಂಘರ್ಷದ ಕದನ ವಿರಾಮಕ್ಕೆ ಹಮಾಸ್ ಒಪ್ಪಿಗೆ ಸೂಚಿಸಿರುವುದಾಗಿ ‘ಅಲ್-ಜಝೀರಾ’ ವರದಿಯಲ್ಲಿ ಉಲ್ಲೇಖಿಸಿದೆ.
ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಅವರು ಖತರ್ ಮತ್ತು ಈಜಿಪ್ಟ್ ಮಧ್ಯ ಪ್ರವೇಶದ ಬಳಿಕ ಕದನ ವಿರಾಮ ಪ್ರಸ್ತಾಪ ಒಪ್ಪಿಕೊಂಡಿದೆ. ಇಸ್ರೇಲ್ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದರೆ, ತಮ್ಮ ಬಳಿ ಒತ್ತೆಯಾಳಾಗಿರುವ ಇಸ್ರೇಲ್ ಪ್ರಜೆಗಳನ್ನು ಬಿಡುಗಡೆಗೊಳಿಸುವುದಾಗಿ ಹಮಾಸ್ ತಿಳಿಸಿದೆ.
ಹಮಾಸ್ ಕದನ ವಿರಾಮಕ್ಕೆ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸರಕಾರದ ಮೇಲೆ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಲು ಒತ್ತಡ ಹೆಚ್ಚಾಗಿದೆ. ಹಮಾಸ್ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿರುವ ವಿಚಾರ ತಿಳಿಯುತ್ತಿದ್ದಂತೆಯೇ ಪ್ರತಿಭಟನೆ ಮಾಡುತ್ತಿರುವ ಜನರು ಇಸ್ರೇಲ್ ಕೂಡ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸುವಂತೆ ಒತ್ತಾಯಿಸುತ್ತಿದ್ದಾರೆ.
“ಹಮಾಸ್ ಕದನ ವಿರಾಮ ಪ್ರಸ್ತಾಪಿಸಿದ್ದಕ್ಕೆ ಇಸ್ರೇಲ್ ತನ್ನ ತೀರ್ಮಾನ ಪ್ರಕಟಿಸಿಲ್ಲ. ಈ ಬಗ್ಗೆ ತುರ್ತು ಸಭೆ ನಡೆಸಿ, ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ” ಎಂದು ಇಸ್ರೇಲ್ನ ಚಾನೆಲ್ 12 ವರದಿ ಮಾಡಿದ್ದನ್ನು ಅಲ್-ಜಝೀರಾ ಉಲ್ಲೇಖಿಸಿದೆ. ಈ ನಡುವೆ ಪ್ರತಿಕ್ರಿಯಿಸಿರುವ ಹಮಾಸ್, “ಚೆಂಡು ನಿಮ್ಮ ಅಂಗಳದಲ್ಲಿದೆ. ತೀರ್ಮಾನ ಪ್ರಕಟಿಸಿ” ಎಂದು ಇಸ್ರೇಲ್ಗೆ ತಿಳಿಸಿದೆ.
ಹಮಾಸ್ ಕದನ ವಿರಾಮಕ್ಕೆ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಗಾಝಾ ಹಾಗೂ ರಫಾ ಗಡಿಗಳಲ್ಲಿ ಸಂಭ್ರಮಾಚರಣೆ ಮನೆ ಮಾಡಿದೆ.