ನ್ಯೂಯಾರ್ಕ್ ನಗರದ 24ಕ್ಕೂ ಅಧಿಕ ಯೆಹೂದಿ ಪ್ರಾರ್ಥನಾ ಮಂದಿರ, ಮ್ಯೂಸಿಯಂ ಹಾಗೂ ಸಂಸ್ಥೆಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಲಾಗಿದ್ದು ಇದರಿಂದ ಕೆಲ ಹೊತ್ತು ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ಮ್ಯಾನ್ಹಟನ್ ನಗರದಲ್ಲಿ 14 ಯೆಹೂದಿ ಪ್ರಾರ್ಥನಾ ಮಂದಿರ ಮತ್ತು ಯೆಹೂದಿ ಸಂಸ್ಥೆಗಳು, ಬ್ರೂಕ್ಲಿನ್ನ 2, ಕ್ವೀನ್ಸ್ನಲ್ಲಿ 5, ಲಾಂಗ್ಐಲ್ಯಾಂಡ್ನ ಒ0ದು ಯೆಹೂದಿ ಸಂಸ್ಥೆಗೆ, ದಿ ನ್ಯೂಯಾರ್ಕ್ ಲ್ಯಾಂಡ್ಮಾಕ್ರ್ಸ್ ಕನ್ಸರ್ವೆನ್ಸಿ (ಮ್ಯೂಸಿಯಂ)ಗೆ ಇ-ಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆ ಕರೆ ರವಾನೆಯಾಗಿದೆ.
`ನಿಮ್ಮ ಕಟ್ಟಡದಲ್ಲಿ ಬಾಂಬ್ ಇರಿಸಿದ್ದೇನೆ. ನಿಮಗೆ ಹೆಚ್ಚಿನ ಸಮಯಾವಕಾಶವಿಲ್ಲ. ತಕ್ಷಣ ಓಡಿಹೋಗಿ. ಇಲ್ಲದಿದ್ದರೆ ರಕ್ತದ ಅಭಿಷೇಕವಾಗುತ್ತದೆ’ ಎಂದು `ಭಯೋತ್ಪಾದಕರು 111′ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿರುವ ಸಂಘಟನೆಯ ಸದಸ್ಯ ಎಚ್ಚರಿಕೆ ನೀಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಕ್ಷಣ ಶೋಧ ಕಾರ್ಯಾಚರಣೆ ನಡೆಸಿದ್ದು ಇದು ಹುಸಿ ಬಾಂಬ್ ಕರೆ ಎಂದು ದೃಢಪಟ್ಟಿದೆ. ಇದೀಗ ಇ-ಮೇಲ್ ರವಾನಿಸಿರುವ ವ್ಯಕ್ತಿಯ ಬಗ್ಗೆ ತನಿಖೆ ಮುಂದುವರಿದಿದೆ ಎಂದು ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ತಿಳಿಸಿದ್ದಾರೆ.