ಸೋಮವಾರ ಇರಾನ್ನಲ್ಲಿ ಯಸುಜ್ ಪ್ರದೇಶದಲ್ಲಿ ತೀವ್ರ ಮಳೆಯಾಗಿದ್ದು ಈ ವೇಳೆ ಅಪರೂಪದ ಘಟನೆ ನಡೆದಿದೆ. ಮಳೆಯ ವೇಳೆ ಆಗಸದಿಂದ ಉದುರಿದ ಮೀನುಗಳು ಉದುರಿದ್ದು ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಜೀವಂತ ಮೀನುಗಳು ಆಕಾಶದಿಂದ ಭೂಮಿಗೆ ಬಿದ್ದಿದ್ದು, ರಸ್ತೆಯಲ್ಲಿ ಎಗರಿವೆ. ಈ ದೃಶ್ಯಗಳನ್ನು ಸ್ಥಳೀಯರು ಮೊಬೈಲ್ ಫೋನ್ ನಲ್ಲಿ ಸೆರೆ ಹಿಡಿದಿದ್ದಾರೆ. ಈ ಘಟನೆ ಇರಾನ್ ನ ಮುನ್ಸಿಪಲ್ ಪ್ಲಾಜಾ ಬಳಿ ಮೀನುಗಳು ಆಕಾಶದಿಂದ ರಸ್ತೆಗೆ ಬಿದ್ದಿದೆ. ದೃಶ್ಯವನ್ನು ಸೆರೆಹಿಡಿದ ವ್ಯಕ್ತಿ ಆಕಾಶದಿಂದ ಭೂಮಿಯತ್ತ ಬೀಳುತ್ತಿದ್ದ ಜೀವಂತ ಮೀನು ಒದ್ದಾಡುತ್ತಿರುವುದನ್ನು ತೋರಿಸಿದ್ದಾರೆ. ಇರಾನ್ ಈಗಾಗಲೇ ಪ್ರವಾಹದಿಂದ ತತ್ತರಿಸಿದೆ. ಇದೇ ಪ್ರವಾಹದ ಜೊತೆಗೆ ಸಣ್ಣ ಪಟ್ಟಣಗಳು ಚಂಡಮಾರುತದ ಹೊಡೆತಕ್ಕೆ ತತ್ತರಿಸಿದೆ. ಸಮುದ್ರದ ತೀರದಿಂದ 280 ಕಿಲೋ ಮೀಟರ್ ಸಮೀಪದಲ್ಲಿರುವ ಪ್ರದೇಶದಲ್ಲಿ ಗಾಳಿಯಲ್ಲಿ ಬಂದ ಮೀನುಗಳು ಆಕಾಶದಿಂದ ಭೂಮಿಯತ್ತ ಬೀಳುತ್ತಿವೆ.
ಇರಾನ್ ಅಂತಾರಾಷ್ಟ್ರೀಯ ವರದಿಗಳ ಪ್ರಕಾರ, ದೇಶದ 21 ವಿವಿಧ ಜಾಗಗಳಲ್ಲಿ ಅತಿಯಾದ ಮಳೆಯಿಂದ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಭಾನುವಾರದಂದು ಹೊಸ ಅಲೆ ಎದ್ದು ಮತ್ತೆ ಮಳೆಯು ಪ್ರಾರಂಭವಾಗುತ್ತದೆ. ಇದರಿಂದ ನೆರೆಯ ಪರಿಸ್ಥಿತಿಯನ್ನು ಮತ್ತಷ್ಟು ಪ್ರದೇಶಗಳು ಎದುರಿಸಬೇಕಾಗುತ್ತದೆ ಎಂದು ಇರಾನಿನ ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ. ಪೂರ್ವ ಅಜೆರ್ಬೈಜಾನ್ನ ಶಾಬೆಸ್ಟಾರ್ ಕೌಂಟಿಯಲ್ಲಿ ಹೆಚ್ಚು ಪ್ರವಾಹವಾಗಿದ್ದು ಇಲ್ಲಿನ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಎತ್ತ ನೋಡಿದರೂ ಪ್ರವಾಹದ ನೀರು ತುಂಬಿಕೊಂಡಿದೆ.
ಹಲವು ವರದಿಗಳು ಆಕಾಶದಿಂದ ಮೀನಿನ ಮಳೆಯಾಗಿತ್ತು ಎಂದು ಹೇಳುತ್ತದೆ. ಅದು ಅಸಾಮಾನ್ಯವಾದದ್ದು. ನಿಜವಾಗಲೂ ಮಳೆಯಂತೆ ಆಕಾಶದಿಂದ ಮೀನಿನ ಮಳೆ ಆಗುವುದಿಲ್ಲ. ಮೋಡಗಳಿಂದ ಸಂಭವಿಸುವ ಮಳೆಯಿಂದ ಮೀನುಗಳು ಬೀಳುವುದಿಲ್ಲ. ಭೂಮಿಯ ಮೇಲೆ ಜೀವಿಸುವಂತಹ ಮೀನುಗಳೇ ಗಾಳಿಯಲ್ಲಿ ಬಂದು ಬೀಳುತ್ತವೆ.
ವೈಜ್ಞಾನಿಕ ಅವಲೋಕನಗಳ ಪ್ರಕಾರ, ಆಕಾಶದಿಂದ ಮೀನುಗಳು ಬೀಳುವಂತೆ ಭಾಸವಾಗಲು ಸುಂಟರಗಾಳಿ ಕಾರಣ. ಜಲಮೂಲಗಳ ಮೇಲೆ ಹಾದು ಹೋಗುವ ಸುಂಟರಗಾಳಿಗಳನ್ನು ವಾಟರ್ಸ್ಪೌಟ್ಗಳು ಎಂದು ಕರೆಯಲಾಗುತ್ತದೆ. ವಾಟರ್ಸ್ಪೌಟ್ಗಳು ಸರೋವರ ಅಥವಾ ಸಮುದ್ರದ ನೀರನ್ನು ಹೀರಿಕೊಳ್ಳುತ್ತವೆ. ಈ ವೇಳೆ ಕೆಲ ಜಲಚರಪ್ರಾಣಿಗಳು ಸಹ ಸುಂಟರಗಾಳಿಯಲ್ಲಿ ಸೇರುತ್ತದೆ. ಸುಂಟರಗಾಳಿಯ ಸುಳಿಯೊಳಗೆ ಸೇರುವ ಜಲಚರಗಳು ಅಥವಾ ಮೀನುಗಳು ಗಾಳಿಯ ವೇಗಕ್ಕೆ ಸುಂಟರಗಾಳಿ ಹೋಗುವ ದಿಕ್ಕಲ್ಲೇ ತಿರುಗುತ್ತಾ ಹೋಗುತ್ತವೆ. ಮೋಡಗಳ ಸುತ್ತ ಸುತ್ತುತ್ತಾ ಸುಂಟರಗಾಳಿ ಕಡಿಮೆಯಾದಾಗ ಮೇಲಿನಿಂದ ಮೀನುಗಳು ಭೂಮಿಯತ್ತ ಬೀಳುತ್ತದೆ. ಮೊದಲಿದ್ದ ಸ್ಥಳಗಳಿಂದ ಬೇರೆ ದೂರ ಸ್ಥಳಗಳಲ್ಲಿ ಮತ್ತೆ ಮೀನುಗಳು ಬೀಳುತ್ತವೆ.
ಇರಾನ್ ನಲ್ಲಿ ಈಗ ವೈರಲ್ ಆಗುತ್ತಿರುವ ಮೀನಿನ ಮಳೆ ವಿಡಿಯೋ ಸಹ ಇದೇ ಕಾರಣದಿಂದ ಸಂಭವಿಸಿದೆ. ದೇಶದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಚಂಡಮಾರುತಗಳು ಪ್ರಭಾವ ಬೀರಿದೆ. ಇದರಿಂದ ಮೀನುಗಳು ರಸ್ತೆಯಲ್ಲಿ ಬೀಳುವಂತಹ ಪರಿಸ್ಥಿತಿ ಬಂದಿದೆ. ಈ ಅಪರೂಪದ ವಿಡಿಯೋವನ್ನು ಅಲ್ಲೇ ಇದ್ದ ವ್ಯಕ್ತಿ ತನ್ನ ಮೊಬೈಲ್ ಫೋನ್ ನಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.