ತೆಲುಗು ಚಿತ್ರರಂಗದ ಖ್ಯಾತ ನಟ, ನಿರ್ಮಾಪಕ ಪವನ್ ಕಲ್ಯಾನ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನಿರ್ಮಾಪಕ ಬಂಡ್ಲ ಗಣೇಶ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಸುಮಾರು 75 ಕೋಟಿ ಮೌಲ್ಯದ ಮನೆಯೊಂದನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದಾರೆಂದು ಆರೋಪಿಸಿ ಸಂಸ್ಥೆಯೊಂದು ಬಂಡ್ಲ ಗಣೇಶ್ ವಿರುದ್ಧ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.
ಹೀರಾ ಗ್ರೂಫ್ನ ಸಿಇಓ ನೌಹೀರಾ ಶೇಖ್, ಬಂಡ್ಲ ಗಣೇಶ್ ವಿರುದ್ಧ ದೂರು ನೀಡಿದ್ದಾರೆ. ಗಣೇಶ್ 75 ಕೋಟಿ ಮೌಲ್ಯದ ಮನೆಯೊಂದನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದಲ್ಲದೆ, ತಮಗೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದ್ದಾರೆ.ಈ ಬಗ್ಗೆ ಹೈದರಾಬಾದ್ನ ಫಿಲಂ ನಗರ್ ಪೊಲೀಸ್ ಠಾಣೆಯಲ್ಲಿ ನೌಹೀರಾ ಶೇಖ್ ದೂರು ದಾಖಲಿಸಿದ್ದಾರೆ.
ಹೀರಾ ಗ್ರೂಫ್ ನ ಪ್ರಾಪರ್ಟಿಯೊಂದನ್ನು ಬಂಡ್ಲ ಗಣೇಶ್ ಬಾಡಿಗೆಗೆ ಪಡೆದಿದ್ದರು ಎನ್ನಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆಗಳಿಗೆ ಹೀರಾ ಗ್ರೂಫ್ ಹಾಗೂ ಬಂಡ್ಲ ಗಣೇಶ್ ಸಹಿ ಮಾಡಿದ್ದರು. ಬಾಡಿಗೆಗೆ ಒಪ್ಪಂದಕ್ಕಾಗಿ 3 ಕೋಟಿ ರೂಪಾಯಿ ಹಣವನ್ನು ಬಂಡ್ಲ ಗಣೇಶ್ ಪಾವತಿ ಮಾಡಿದ್ದರು. ಆದರೆ ಪ್ರಾಪರ್ಟಿ ವಿಷಯವಾಗಿ ಕಳೆದ ಕೆಲ ತಿಂಗಳುಗಳಿಂದ ಬಂಡ್ಲ ಗಣೇಶ್ ಹಾಗೂ ಹೀರಾ ಗ್ರೂಫ್ ನಡುವೆ ವೈಮನಸ್ಯ ಉಂಟಾಗಿದೆ. ಇದೀಗ ಬಂಡ್ಲ ಗಣೇಶ್ ತಮಗೆ ‘ನ್ಯಾಯ’ ದೊರಕುವವರೆಗೆ ಆಸ್ತಿ ತೊರೆಯುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ಬಂಡ್ಲ ಗಣೇಶ್ ಹೀರಾ ಗ್ರೂಫ್ ವಿರುದ್ಧ ದೂರು ದಾಖಲಿಸಿದ್ದರು. ಹೀರಾ ಗ್ರೂಫ್ನವರು ಆಸ್ತಿಯೊಂದಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆ ದಾಳಿ ಮಾಡಿದ್ದರು. ಹಲ್ಲೆಗೆ ಯತ್ನಿಸಿದರು ಎಂದು ದೂರು ದಾಖಲಿಸಿದ್ದರು. ಅದಾಗಿ ಕೆಲ ದಿನಗಳ ನಂತರ ಹೀರಾ ಗ್ರೂಫ್ನ ಸಿಇಓ ನೌಹೀರಾ ಶೇಖ್ ಮಾನವ ಹಕ್ಕು ಸಂಸ್ಥೆಗೆ ದೂರು ದಾಖಲಿಸಿದ್ದರು. ಡಿಜಿಪಿಯನ್ನು ಸಹ ಭೇಟಿ ಮಾಡಿ ಮೌಖಿಕ ದೂರು ನೀಡಿದ್ದರು. ಈಗ ಫಿಲಂ ನಗರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಿರ್ಮಾಪಕ, ನಟ ಬಂಡ್ಲ ಗಣೇಶ್ ರಿಯಲ್ ಎಸ್ಟೇಟ್ ಉದ್ಯಮದಲ್ಲಿಯೂ ತೊಡಗಿಕೊಂಡಿದ್ದಾರೆ. ಸಿನಿಮಾ ರಂಗದ ಹಲವರಿಗೆ ಆಸ್ತಿ ಖರೀದಿ ಹಾಗೂ ಮಾರಾಟದಲ್ಲಿ ನೆರವಾಗಿದ್ದಾರೆ. ಬಂಡ್ಲ ಗಣೇಶ್ಗೆ ದೂರುಗಳು ಸಹ ಹೊಸದಲ್ಲ. ಈ ಹಿಂದೆಯೂ ಸಹ ಕೆಲವು ವಂಚನೆ ಪ್ರಕರಣಗಳು ಬಂಡ್ಲ ವಿರುದ್ಧ ದಾಖಲಾಗಿವೆ.