ಬೇಸಿಗೆಯಲ್ಲಿ ಹೆಚ್ಚಿನವರು ಸಾಮಾನ್ಯ ತಾಪಮಾನದ ನೀರಿನ ಬದಲು ಫ್ರಿಜ್ಜಿನಿಂದ ಅತಿ ತಂಪಾಗಿರುವ ನೀರನ್ನು ನೇರವಾಗಿ ಕುಡಿಯುತ್ತಾರೆ. ಆದರೆ ಇಷ್ಟು ತಂಪಾದ ನೀರನ್ನು ಕುಡಿಯುವುದು ಎಷ್ಟು ಆರೋಗ್ಯಕರ?
ಬೇಸಿಗೆಯಲ್ಲಿ, ದೇಹದಲ್ಲಿ ನೀರಿನ ಕೊರತೆಯಾಗದಂತೆ ಸಾಕಷ್ಟು ನೀರು ಕುಡಿಯುತ್ತೇವೆ. ಆದರೆ ಬಾಯಾರಿಕೆಯನ್ನು ನೀಗಿಸಲು ಮತ್ತು ದೇಹ ಅತಿ ಕ್ಷಿಪ್ರವಾಗಿ ತಂಪಾಗುವಂತೆ ಮಾಡಲು ಹಲವರು ಫ್ರಿಜ್ಜಿನಿಂದ ಅತಿ ತಂಪಾಗಿರುವ ನೀರನ್ನು ನೇರವಾಗಿ ಗಟಗಟನೇ ಕುಡಿದುಬಿಡುತ್ತಾರೆ. ಇಷ್ಟು ತಂಪಾದ ನೀರು ಲಭ್ಯವಿಲ್ಲದಿದ್ದರೆ, ಮಂಜುಗಡ್ಡೆಯ ತುಂಡನ್ನು ಸಾಮಾನ್ಯ ನೀರಿಗೆ ಹಾಕಿ ತಂಪಾದ ಬಳಿಕವೇ ಕುಡಿಯುತ್ತಾರೆ.
ಇಷ್ಟು ತಂಪಾಗಿರುವ ನೀರಿನ ಸೇವನೆ ಆ ಕ್ಷಣಕ್ಕೆ ದೇಹವನ್ನು ತಂಪಾಗಿಸುವ ತಾತ್ಕಾಲಿಕ ಸಂತಸವನ್ನು ನೀಡಬಹುದು. ಬೇಸಿಗೆಯಲ್ಲಿ ಅತಿ ತಂಪಾದ ನೀರನ್ನು ಕುಡಿಯುವುದೋ ಸಾಮಾನ್ಯ ತಾಪಮಾನದಲ್ಲಿರುವ ನೀರನ್ನು ಕುಡಿಯುವುದೋ ಇದು ಪ್ರತಿ ವ್ಯಕ್ತಿಯ ವೈಯಕ್ತಿಕ ಆಯ್ಕೆಯಾಗಿದೆ. ಅತಿ ತಂಪಾದ ನೀರನ್ನು ಕುಡಿಯುವುದರಿಂದ ಆರೋಗ್ಯ ಕೆಡುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಆದರೆ, ಆಯುರ್ವೇದವೂ, ಪಾಶ್ಚಾತ್ಯ ವೈದ್ಯಪದ್ದತಿಯೂ ಸಮಾನವಾಗಿ ನೀಡುವ ವಿವರಣೆ ಎಂದರೆ, ತಣ್ಣೀರಿನ ಸೇವನೆಯಿಂದ ಆರೋಗ್ಯವೇನೂ ಬಾಧೆಗೊಳ್ಳದು, ಆದರೆ, ಉಗುರುಬೆಚ್ಚಗಿನ ನೀರಿನ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುವ ಕಾರಣ ಇದೇ ಉತ್ತಮ ಆಯ್ಕೆಯಾಗಿದೆ.
ಸಾಮಾನ್ಯವಾಗಿ ತಜ್ಞರು ವಿವರಿಸುವ ತಣ್ಣೀರು ಎಂದರೆ ಸಾಮಾನ್ಯ ತಾಪಮಾನದಲ್ಲಿರುವ ನೀರೇ ಹೊರತು ಫ್ರಿಜ್ಜಿನಲ್ಲಿರುವ ಮಂಜು ಕರಗಿದಷ್ಟು ತಂಪಾದ ನೀರಲ್ಲ. ಇಷ್ಟು ತಂಪಾದ ನೀರನ್ನು ಕುಡಿಯುವುದರಿಂದ ಖಂಡಿತವಾಗಿಯೂ ಆರೋಗ್ಯದ ಮೇಲೆ ಋಣಾತ್ಮಕ ಪ್ರಭಾವ ಬೀರುತ್ತದೆ ಎಂದು ಹಲವು ಅಧ್ಯಯನಗಳು ಖಚಿತಪಡಿಸಿವೆ. ಮೊತ್ತ ಮೊದಲಾಗಿ ಈ ನೀರನ್ನು ಕುಡಿದ ಕೆಲವೇ ಕ್ಷಣಗಳಲ್ಲಿ ಗಂಟಲಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಹಾಗೂ ಸೋಂಕು ಎದುರಾಗುವ ಸಾಧ್ಯತೆ ಹೆಚ್ಚುತ್ತದೆ. ಆದರೆ, ಈ ಸಂಗತಿಗಳನ್ನು ಇನ್ನೂ ಯಾವುದೇ ಅಧ್ಯಯನ ದೃಢೀಕರಿಸಿಲ್ಲ
ಬೇಸಿಗೆಯಲ್ಲಿ, ದೇಹ ನಿರ್ಜಲೀಕರಣಕ್ಕೆ ಒಳಗಾಗದಂತೆ ನೀರನ್ನು ಸೇವಿಸುತ್ತಾ ಇರಬೇಕು. ಬೇಸಿಗೆಯಲ್ಲಿ ದೇಹ ನಿರ್ಜಲೀಕರಣಕ್ಕೆ ಒಳಗಾಗದೇ ಇರಲು ಬಿಸಿನೀರೂ ಆಗಬಹುದು ತಣ್ಣೀರೂ ಆಗಬಹುದು. ದೇಹದಲ್ಲಿ ಸಾಕಷ್ಟು ನೀರಿನ ಸಂಗ್ರಹ ಇದ್ದಾಗ ಕಲ್ಮಶಗಳನ್ನು ವಿಸರ್ಜಿಸುವುದೂ ಸುಲಭವಾಗುತ್ತದೆ. ದೇಹದಲ್ಲಿ ಸಾಕಷ್ಟು ನೀರು ಇದ್ದಾಗಲೇ ತಾಪಮಾನವನ್ನು ಆರೋಗ್ಯಕರ ಮಿತಿಗಳಲ್ಲಿ ಉಳಿಸಿಕೊಳ್ಳಲು ಹಾಗೂ ಎಲ್ಲಾ ಕಾರ್ಯಗಳು ಸುಗಮವಾಗಿ ಸಾಗಲು ಸಾಧ್ಯವಾಗುತ್ತದೆ.
ಆದರೆ, ಕುಡಿಯುವ ನೀರಿನ ತಾಪಮಾನ ಎಷ್ಟಿರಬೇಕು ಎಂಬುದು ವೈಯಕ್ತಿಕ ಆಯ್ಕೆಯಾಗಿದೆ.