IPL ಹಾವಳಿ ಕೊಂಚ ಕಡಿಮೆಯಾಯ್ತು..! ಲೋಕಸಭಾ ಎಲೆಕ್ಷನ್ ಬಿಸಿಯೂ ಆರಿಹೋಯ್ತು. ಹಾಸನ ಪೆನ್ಡ್ರೈವ್ ಚರ್ಚೆಯೊಂದು ಬಿಟ್ರೆ, ಜನರಿಗೆ ಬೇರೆ ಯಾವ್ ಗಮನ ಸೆಳಿತಿರೋ ಅಂಶವೂ ಇಲ್ಲ. ಸಮಸ್ಯೆಗಳ ಕೂಪದೊಳಗೆ ಲಾಕ್ ಆಗಿರೋ ಕನ್ನಡ ಚಿತ್ರರಂಗ ಇನ್ನಾದ್ರೂ ಚೇತರಿಸಿಕೊಳ್ಳಬಹುದಾ..? ಸುಧಾರಿಸಿಕೊಳ್ಳಬಹುದಾ..? ಉತ್ತರ ಇನ್ನೂ ಅನ್ಕ್ಲಿಯರ್, ಸುಲಭವಾಗಿ ವಿವರಿಸಲಾಗದ್ದು..!
ಚುನಾವಣೆ ದೇಶದ ಮೇಲೆ ಹೇಗೆ ಎಫೆಕ್ಟ್ ಕೊಡ್ತೋ, ಹಾಗೇ ಚಿತ್ರೋದ್ಯಮಕ್ಕೂ ಪ್ರಭಾವ ಬೀರಿದೆ. ಅದರಿಂದ ಆಚೆ ಬರೋ ಮುನ್ನ ಒಮ್ಮೆ ಕನ್ನಡ ಚಿತ್ರರಂಗದ ‘ರೀ-ಕ್ಯಾಪ್’ ನೋಡಿದ್ರೆ ಒಮ್ಮೆ ಭಯವಾಗೋದು ಫಿಕ್ಸ್. ಈ ವರ್ಷದ ನಾಲ್ಕು ತಿಂಗಳು ಕಳೆದರೂ ಯಾವ್ ಸಿನಿಮಾನೂ ಅಲ್ಟ್ರಾ ಹಿಟ್ ಎನಿಸಿಕೊಂಡಿಲ್ಲ. ಅವರೇಜ್ ಹಾಗೂ ಸೆಮಿಹಿಟ್ಗಳಲ್ಲೇ ಗಾಂಧಿನಗರ ತೃಪ್ತಿಪಟ್ಟುಕೊಂಡಿದೆ. ದರ್ಶನ್ ಅಭಿನಯದ ‘ಕಾಟೇರ’ ನಂತ್ರ, ಇಂಡಸ್ಟ್ರಿಯಲ್ಲಿ ಅಂತಹ ಹಲ್ಚಲ್ ಏನೂ ಕ್ರಿಯೆಟ್ ಆಗಲೇ ಇಲ್ಲ. ಹಾಗಂತ ಕನ್ನಡದಲ್ಲಿ ಒಳ್ಳೆ ಸಿನಿಮಾಗಳು ಬಂದೇ ಇಲ್ಲ ಅಂತ ಬಿಲ್ಕುಲ್ ಆಗಿ ಹೇಳೊಕೆ ಆಗಲ್ಲ. ಒಳ್ಳೆ ಕಥೆ, ಗಟ್ಟಿ ಪ್ರೆಸೆಂಟೇಶನ್ ಜೊತೆ ಬಂದ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಧಮಾಲ್ ನಡೆಸಿಲ್ಲ. ಹೌದು, ಕನ್ನಡ ಸಿನಿಮಾ ಇಂಡಸ್ಟ್ರಿಗೊಂದು ಹಿಟ್ ಬೇಕೇಬೇಕು..! ಬರೀ ಹಿಟ್ ಅಲ್ಲ, ಮತ್ತೆ ಚಿತ್ರಮಂದಿರಗಳನ್ನ ಆಕ್ಟಿವ್ ಮಾಡೋ ಸಂಜೀವಿನಿಯಂತಹ ಸೂಪರ್ ಹಿಟ್ ಶತಾಯಗತಾಯ ಬೇಕೇಬೇಕು.
ಒಳ್ಳೆ ಚಿತ್ರಗಳು ಕೂಡ ಕೊಂಚ ಸದ್ದು ಮಾಡಿ ಒಂದೇ ವಾರಕ್ಕೆ ಮಿಂಚಿಮರೆಯಾದ ಉದಾಹರಣೆಗಳು ಹೊಸ ಸಿನಿಮಾ ಮೇಕರ್ಗಳಿಗೆ ಉಸಿರು ಕಟ್ಟಿಸಿದೆ. ಚಿಕ್ಕಣ್ಣ ಅಭಿನಯದ ‘ಉಪಾಧ್ಯಕ್ಷ’ ಹಾಗೂ ಯುವರಾಜ್ ಕುಮಾರ್ ಚೊಚ್ಚಲ ಸಿನಿಮಾ ‘ಯುವ’ ಗಲ್ಲಾಪೆಟ್ಟಿಗೆಯಲ್ಲಿ ಸೌಂಡ್ ಮಾಡಿದ್ರೂ, ನಿರೀಕ್ಷೆಯ ಗಟಿ ದಾಟೋಕೆ ಹರಸಾಹಸ ಪಟ್ಟಿವೆ. ಚಿತ್ರಮಂದಿರಗಳ ಟೋಟಲ್ ಕಲೆಕ್ಷನ್ ಹೇಳಿಕೊಳ್ಳುವಂತಿಲ್ಲ. ಸ್ಟಾರ್ ಸಿನಿಮಾಗಳು ಬರೊವರೆಗೂ ಇದೇ ಗತಿ ಅಂತ ಚಿತ್ರಮಂದಿರಗಳ ಮಾಲೀಕರು ಸುಮ್ಮನಾಗಿಬಿಟ್ಟಿದ್ದಾರೆ. ಬೇರೆ ಚಿತ್ರರಂಗಗಳಲ್ಲಿ ಪರಿಸ್ಥಿತಿ ಬೇರೆ ಇದೆ. ಕಂಟೆಂಟ್ ಓಡುತ್ತಿದೆ, ಹೊಸಬರು ಗೆಲ್ಲುತ್ತಿದ್ದಾರೆ. ನಮ್ಮಲ್ಲಿ ಯಾಕೆ ಹೀಗೆ ಎಂಬ ಸಾರ್ವಕಾಲಿಕ ಪ್ರಶ್ನೆ ಮಾತ್ರ ಸಿನಿಮಾಪ್ರೇಮಿಗಳನ್ನ ಗೊಂದಲದಲ್ಲಿಟ್ಟಿದೆ. ವರ್ಷದ ಆರಂಭಕ್ಕೆ ಮಂಕಾದ ಚಿತ್ರರಂಗ, ಮಧ್ಯಭಾಗಕ್ಕೆ ಸುಧಾರಿಸಿಕೊಳ್ಳಬೇಕಾದ್ರೆ ಕನಿಷ್ಟ 2 ಸೂಪರ್ ಹಿಟ್ಗಳನ್ನಾದ್ರೂ ಕೊಡಲೇಬೇಕು ಎಂಬುದೇ ಸಿನಿಮಾಸರ್ಕಲ್ನ ಒಳಕಾಳಜಿ..!
-ಮಾವಳ್ಳಿ ಕಾರ್ತಿಕ್. ಫಿಲಂ ಡೆಸ್ಕ್. ಪ್ರಜಾಟಿವಿ