ತೆಲುಗು ಸೇರಿದಂತೆ ವಿವಿಧ ಭಾಷೆಯ ಸಿನಿಮಾ ಮತ್ತು ವೆಬ್ ಸಿರೀಸ್ ನಲ್ಲಿ ನಟಿಸಿರುವ ದೇವಿಯಾನಿ ಶರ್ಮಾ ಅವರಿಗೆ ಹ್ಯಾಕರ್ಸ್ ಗಳು ವಿಪರೀತ ತೊಂದರೆ ನೀಡಲಾಗುತ್ತಿದೆಯಂತೆ. ಹ್ಯಾಕರ್ಸ್ ಗಳಿಂದ ತಪ್ಪಿಸಿಕೊಳ್ಳೋಕೆ ಆಗದೇ ನಟಿ ಮೂರು ಬಾರಿ ಮುಂಬೈ ಪೊಲೀಸರಿಗೂ ದೂರು ನೀಡಿದ್ದು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ನನ್ನ ಮೊಬೈಲ್ ಅನ್ನು ಯಾರೋ ಹ್ಯಾಕ್ ಮಾಡಿದ್ದರು. ಅಥವಾ ಕ್ಲೋನ್ ಮಾಡಿದ್ದರು. ನನ್ನ ಮೊಬೈಲ್ನಲ್ಲಿದ್ದ ನನ್ನ ಖಾಸಗಿ ಮಾಹಿತಿಗಳನ್ನು ಕದಿಯಲಾಗಿದೆ. ನನ್ನನ್ನು ಬ್ಲಾಕ್ ಮೇಲ್ ಮಾಡಲೆಂದು ಅಥವಾ ನನ್ನನ್ನು ಹೆದರಿಸಲೆಂದು ಹೀಗೆ ಮಾಡಲಾಗಿದೆ ಎಂದು ಊಹಿಸುತ್ತಿದ್ದೇನೆ. ಈಗ ಮತ್ತೆ ನನ್ನ ವಾಟ್ಸ್ಆಪ್ ಅನ್ನು ಹ್ಯಾಕ್ ಮಾಡಲಾಗಿದೆ. ನನ್ನ ಮೊಬೈಲ್ನ ಸೆಟ್ಟಿಂಗ್ಸ್ಗಳನ್ನು ಬದಲು ಮಾಡಲಾಗಿದೆ. ನನ್ನ ಮೊಬೈಲ್ ಫೋನ್ ಮೊದಲಿನಂತೆ ಇಲ್ಲ ಎಂಬುದು ನನಗೆ ಖಾತ್ರಿಯಾಗಿದೆ’ ಎಂದಿದ್ದಾರೆ ದೇವಯಾನಿ ಶರ್ಮಾ.
‘ನನ್ನ ಮೊಬೈಲ್ ಬಳಸಿ ಬೇರೆ ಯಾರಿಗಾದರೂ ಸಂದೇಶ ಕಳುಹಿಸಲಾಗಿದೆಯೇ ಎಂಬುದು ನನಗೆ ಗೊತ್ತಿಲ್ಲ. ಒಂದೊಮ್ಮೆ ಹಾಗೆ ಯಾರಿಗಾದರೂ ಸಂದೇಶ ಬಂದಿದ್ದರೆ ದಯವಿಟ್ಟು ಅದನ್ನು ನಿರ್ಲಕ್ಷಿಸಿ ನಿಮಗೆ ನಾನು ಸಂದೇಶ ಕಳಿಸಿಲ್ಲ. ಈ ಬೆಳವಣಿಗೆಯಿಂದ ನನ್ನ ಮಾನಸಿಕ ಆರೋಗ್ಯ ಹಾಳಾಗಿದೆ. ರಾತ್ರಿ ವೇಳೆ ನಿದ್ದೆ ಬರುತ್ತಿಲ್ಲ. ನಾನು ಮೂರು ಬಾರಿ ಮುಂಬೈನ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇನೆ. ನನಗೆ ವ್ಯವಸ್ಥೆಯ ಮೇಲೆ ನಂಬಿಕೆ ಇದೆ, ಪೊಲೀಸರು ಪ್ರಕರಣದ ತನಿಖೆ ನಡೆಸುವರೆಂಬ ವಿಶ್ವಾಸವಿದೆ’ ಎಂದಿದ್ದಾರೆ.
‘ಯಾರಿಗಾದರೂ ನನ್ನ ಮೊಬೈಲ್ ಸಂಖ್ಯೆಯಿಂದ ಚಿತ್ರ ವಿಚಿತ್ರ ಸಂದೇಶಗಳು ಬಂದರೆ ಅದನ್ನು ನಿರ್ಲಕ್ಷಿಸಿ, ನಾನು ಈಗಾಗಲೇ ಈ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದೇನೆ ಹಾಗೂ ಪರಿಹಾರ ಮಾಡಿಕೊಳ್ಳಲಿದ್ದೇನೆ. ನನ್ನ ಹೆಸರು ಹಾಳು ಮಾಡಲು, ನನ್ನ ವೃತ್ತಿಯನ್ನು ಹಾಳುಗೆಡವಲು ಮಾಡಿರುವ ಸ್ಪಷ್ಟ ಹುನ್ನಾರ ಇದೆಂದು ನನಗೆ ಖಾತ್ರಿ ಆಗಿದೆ. ಕಲಾವಿದರ ಜೀವನ ಕಷ್ಟ, ಈ ರೀತಿಯ ಘಟನೆಗಳು ಅವರ ಜೀವನವನ್ನು ಇನ್ನಷ್ಟು ಕಠಿಣಗೊಳಿಸುತ್ತವೆ. ಆದಷ್ಟು ಬೇಗ ಈ ಸಮಸ್ಯೆಯಿಂದ ಹೊರಗೆ ಬರುವ ನಂಬಿಕೆ ನನಗೆ ಇದೆ’ ಎಂದು ನಟಿ ಸಾಮಾಜಿಕ ಜಾಲಾ ತಾಣದಲ್ಲಿ ಬರೆದುಕೊಂಡಿದ್ದಾರೆ.
ದೇವಯಾನಿ ಶರ್ಮಾ, ತೆಲುಗಿನ ‘ಅನಗನಗಾ’ ಹಾಗೂ ‘ರೊಮ್ಯಾಂಟಿಕ್’ ಸಿನಿಮಾಗಳಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಬಳಿಕ ಹಿಂದಿಯ ‘ಸೇವ್ ದಿ ಟೈಗರ್ಸ್’ ಸಿನಿಮಾದಲ್ಲಿಯೂ ಬೋಲ್ಡ್ ಪಾತ್ರದಲ್ಲಿ ನಟಿಸಿದ್ದರು. ಇತ್ತೀಚೆಗೆ ಬಿಡುಗಡೆ ಆದ ಮಾಧವನ್, ಅಜಯ್ ದೇವಗನ್ ನಟನೆಯ ‘ಶೈತಾನ್’ ನಲ್ಲಿ ದೇವಯಾನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.