ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆ ಮುಂದೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮೊಹಮ್ಮದ್ ರಫೀಕ್ ಚೌಧರಿ ಎಂದು ಗುರುತಿಸಲಾಗಿದ್ದು, ರಾಜಸ್ಥಾನದ ನಾಗೌರ್ ನಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೆ ಒಳಗಾಗಿರುವ ಮೊಹಮ್ಮದ್ ರಫೀಕ್ ಕೂಡ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ತಂಡದ ಸದಸ್ಯನೆಂದು ಹೇಳಲಾಗುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತೀವ್ರ ತನಿಖೆ ನಡೆಸಿದ್ದಾರೆ.
ಸಲ್ಮಾನ್ ಮನೆ ಮುಂದೆ ಗುಂಡಿನ ದಾಳಿ ಪ್ರಕರಣದಲ್ಲಿ ಬಂಧಿತನಾದ ಐದನೇ ವ್ಯಕ್ತಿ ಈತನಾಗಿದ್ದಾನೆ. ಈಗಾಗಲೇ ನಾಲ್ಕು ಜನರನ್ನು ಪೊಲೀಸರು ಬಂಧಿಸಿ, ತನಿಖೆಗೆ ಒಳಪಡಿಸಿದ್ದಾರೆ. ಈ ನಾಲ್ವರಲ್ಲಿ ಓರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸಲ್ಮಾನ್ ಖಾನ್ ಅವರ ಮನೆಮುಂದೆ ಗುಂಡಿನ ದಾಳಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿತ್ತು. ಪೊಲೀಸ್ ಕಸ್ಟಡಿಯಲ್ಲಿಟ್ಟುಕೊಂಡು ಅವರನ್ನು ವಿಚಾರಣೆ ಮಾಡಲಾಗುತ್ತಿತ್ತು. ಈ ವೇಳೆ ಅನುಜ್ ಥಾಪಸ್ ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಜ್ ಕುಟುಂಬ ಮುಂಬೈ ಹೈಕೋರ್ಟ್ ಮೆಟ್ಟಿಲು ಏರಿದ್ದರು. ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ತಮ್ಮ ಮಗ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ, ಪೊಲೀಸರೇ ಮಗನನ್ನು ಕೊಂದಿದ್ದಾರೆ ಎಂದು ಮೃತನ ಪೋಷಕರು ಆರೋಪಿಸಿದ್ದಾರೆ. ಠಾಣೆಯಲ್ಲಿನ ಸಿಸಿಟಿವಿ ವಿಡಿಯೋವನ್ನು ಒಪ್ಪಿಸುವಂತೆ ಮತ್ತು ಹೊಸದಾಗಿ ಮರಣೋತ್ತರ ಪರೀಕ್ಷೆಯನ್ನು ಮಾಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಥಾಪನ್ ಠಾಣೆಯ ಪೊಲೀಸರ ಹಿಂಸೆಯಿಂದಾಗಿ ತಾವು ಮಗನನ್ನು ಕಳೆದುಕೊಂಡಿದ್ದೇವೆ ಎಂದು ಪೋಷಕರು ಆರೋಪಿಸಿದ್ದಾರೆ.