ದುಬಾರಿ ಉಡುಗೊರೆ ಪಡೆದ ಆರೋಪದಡಿ ಭಾರತ ಮೂಲದ ಸಿಂಗಪುರ ಸರ್ಕಾರದ ಮಾಜಿ ಸಚಿವ ಎಸ್.ಈಶ್ವರನ್ ವಿರುದ್ಧದ ಆರೋಪಗಳ ವಿಚಾರಣೆಗೆ ಅಲ್ಲಿನ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ವಿಚಾರಣೆಯು ಬರುವ ಆಗಸ್ಟ್ನಿಂದ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಈಶ್ವರನ್ ₹246 ಕೋಟಿ ಮೌಲ್ಯದ ಉಡುಗೊರೆ ಸ್ವೀಕರಿಸಿದ ಆರೋಪ ಕೇಳಿ ಬಂದಿದೆ. ನ್ಯಾಯಾಲಯದಲ್ಲಿ ಈಶ್ವರನ್ ಪರ ವಕೀಲ ದೇವಿಂದರ್ ಸಿಂಗ್ ಅವರು ವಾದ ಮಂಡಿಸಿ, ‘ಸಚಿವರಾಗಿದ್ದ ಅವಧಿಯಲ್ಲಿ ಅದರ ಸ್ಥಾನಮಾನದ ಇತಿಮಿತಗಳ ಅರಿವು ನನ್ನ ಕಕ್ಷೀದಾರರಿಗೆ ಇತ್ತು. ಹೀಗಾಗಿ ತಮ್ಮ ಮೇಲೆ ಹೊರಿಸಲಾಗಿರುವ ಎಲ್ಲಾ ಆರೋಪಗಳ ವಿಚಾರಣೆಯನ್ನೂ ನ್ಯಾಯಾಲಯ ನಡೆಸಲಿ. ಅದನ್ನು ಎದುರಿಸಲು ಸಿದ್ಧ ಎಂದಿದ್ದಾರೆ’.
‘ಕುಟುಂಬದವರು ಹಾಗೂ ವೈಯಕ್ತಿಕ ಸ್ನೇಹಿತರಿಂದ ಉಡುಗೊರೆ ಸ್ವೀಕರಿಸುವುದನ್ನು ತಡೆಯುವುದು ಸಚಿವರಿಂದ ಸಾಧ್ಯವಾಗಿರಲಿಲ್ಲ. ಆದರೆ ಆರೋಪ ಕೇಳಿಬಂದಿರುವ ಉಡುಗೊರೆಯು ರಿಯಲ್ ಎಸ್ಟೇಟ್ ಉದ್ಯಮಿ ಆಂಗ್ ಬೆಂಗ್ ಸೆಂಗ್ ಹಾಗೂ ನಿರ್ಮಾಣ ಸಂಸ್ಥೆಯ ಮಾಲೀಕ ಲುಮ್ ಕಾಕ್ ಸೆಂಗ್ ಅವರು ನೀಡಿದ್ದು ಎಂಬುದರ ಮಾಹಿತಿ ಈಶ್ವರನ್ಗೆ ಇರಲಿಲ್ಲ. ಸ್ನೇಹಿತರು ನೀಡಿದ ಉಡುಗೊರೆಯನ್ನು ಸಂಶಯದಿಂದ ನೋಡುವ ಸ್ಥಿತಿಯಲ್ಲಿ ಅವರು ಇರಲಿಲ್ಲ. ಜೊತೆಗೆ ಈ ಉಡುಗೊರೆಯ ಹಿಂದೆ ಸಂಚು ಅಡಗಿರುವ ಸಂಗತಿಯೂ ಅವರಿಗೆ ಗೊತ್ತಿರಲಿಲ್ಲ’ ಎಂದು ವಕೀಲ ದೇವಿಂದರ್ ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
61 ವರ್ಷದ ಈಶ್ವರನ್ ಅವರ ವಿರುದ್ಧ ಮೊದಲು 27 ಆರೋಪಗಳು ಕೇಳಿಬಂದಿದ್ದವು. ನಂತರ ಮತ್ತೆ 8 ಆರೋಪಗಳು ಸಲ್ಲಿಕೆಯಾಗಿದ್ದವು. ಇವುಗಳಲ್ಲಿ 24 ಆರೋಪಗಳು ಸಾರ್ವಜನಿಕರ ಸೇವಕನಾಗಿ ದುಬಾರಿ ಉಡುಗರೆ ಪಡೆದ ಆರೋಪವಾದರೆ, ಭ್ರಷ್ಟಾಚಾರ ಪ್ರಕರಣ ಮತ್ತು ಒಂದು ನ್ಯಾಯಕ್ಕೆ ಅಡ್ಡಿಪಡಿಸಿದ ಪ್ರಕರಣಗಳೂ ಸೇರಿದೆ. ಇದರಲ್ಲಿ ವಿಮಾನ ಟಿಕೆಟ್ ಹಾಗೂ ಹೋಟೆಲ್ ವಾಸ್ತವ್ಯ, ಕೆಲ ಕಾರ್ಯಕ್ರಮಗಳ ಟಿಕೆಟ್ ಹಾಗೂ ₹102 ಕೋಟಿ ಮೌಲ್ಯದ ಇನ್ನಿತರ ಉಡುಗೊರೆಗಳು ಸೇರಿವೆ ಎಂದೆನ್ನಲಾಗಿದೆ. ‘ತಾನು ನಿರಪರಾಧಿಯಾಗಿದ್ದು, ಎಲ್ಲಾ ಆರೋಪಗಳು ನಿರಾಧಾರ’ ಎಂದು ಈಶ್ವರನ್ ಹೇಳಿದ್ದಾರೆ.