ಆಂದ್ರದಲ್ಲಿ ಚುನಾವಣಾ ಕಾವು ಜೋರಾಗಿದೆ. ಸಾಕಷ್ಟ ಸ್ಟಾರ್ ನಟರು ತಮ್ಮ ನೆಚ್ಚಿನ ಅಭ್ಯರ್ಥಿಯ ಪರ ಬೀದಿಗಿಳಿದು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ತೆಲುಗು ಚಿತ್ರರಂಗದ ಸ್ಟಾರ್ ನಟ ಪವನ್ ಕಲ್ಯಾಣ್ ಸಿನಿಮಾಗಳ ಜೊತೆಗೆ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದಾರೆ. ಪವನ್ ಕಲ್ಯಾಣ್ ಜನಸೇನಾ ಪಕ್ಷ ಸ್ಥಾಪಿಸಿ ಹತ್ತು ವರ್ಷವಾಗಿದೆ.
ಕಳೆದ ಕೆಲವು ಚುನಾವಣೆಗಳಲ್ಲಿ ಪವನ್ ಕಲ್ಯಾಣ್ಗೆ ನಿರೀಕ್ಷಿತ ಯಶಸ್ಸು ಸಿಕ್ಕಿರಲಿಲ್ಲ. ಆದರೆ ಈ ಬಾರಿಯ ಆಂಧ್ರ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಪವನ್ ಪಕ್ಷ ಛಾಪು ಮೂಡಿಸುವ ಸಾಧ್ಯತೆ ಇದೆ. ಪವನ್ ಕಲ್ಯಾಣ್ಗೆ ಈ ಬಾರಿ ಇತರೆ ರಾಜಕೀಯ ಪಕ್ಷಗಳ ಜೊತೆಗೆ ಸಿನಿಮಾ ರಂಗದ ಸೆಲೆಬ್ರಿಟಿಗಳ ಬೆಂಬಲ ಜೋರಾಗಿಯೇ ದೊರೆತಿದೆ. ಈ ಹಿಂದೆ ಮುನಿಸಿಕೊಂಡಿದ್ದ ಅಣ್ಣ ಮೆಗಾಸ್ಟಾರ್ ಚಿರಂಜೀವಿ ಸಹ ಪವನ್ ಕಲ್ಯಾಣ್ಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಬೆಂಬಲ ಸೂಚಿಸಿದ ಕೆಲವೇ ದಿನಗಳಲ್ಲಿ ಚಿರಂಜೀವಿ ಯೂ-ಟರ್ನ್ ಹೊಡೆದರಾ ಎಂಬ ಅನುಮಾನ ಹುಟ್ಟಿಕೊಂಡಿದೆ.
ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಪ್ರಕಟಿಸಿದ್ದ ಮೆಗಾಸ್ಟಾರ್ ಚಿರಂಜೀವಿ, ಸಹೋದರ ಪವನ್ ಕಲ್ಯಾಣ್ ಪರವಾಗಿ ಮಾತನಾಡಿದ್ದರು. ಪವನ್ಗೆ ಸಮಾಜ ಸೇವೆ ಮಾಡುವ ಅತೀವ ಆಸೆಯಿದೆಯೆಂದು, ಪವನ್ ಜನಪರ ಕಾಳಜಿ ಇರುವ ವ್ಯಕ್ತಿಯೆಂದು. ಈ ಬಾರಿ ಪವನ್ಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು. ಸಹೋದರ ಪವನ್ಗೆ ಚಿರಂಜೀವಿ ಬೆಂಬಲ ನೀಡಿದ್ದು ಮೆಗಾಸ್ಟಾರ್ ಅಭಿಮಾನಿಗಳಿಗೆ ಸಂತಸವಾಗಿತ್ತು. ಚಿರಂಜೀವಿ ಮತ್ತೆ ಸಕ್ರಿಯ ರಾಜಕೀಯಕ್ಕೆ ಬಂದರು ಎಂಬ ಸುದ್ದಿ, ಮಾಧ್ಯಮ ವಿಶ್ಲೇಷಣೆಗಳು ಹರಿದಾಡಿದ್ದವು.
ಅದಾದ ಕೆಲವೇ ದಿನಗಳ ಬಳಿಕ ಚಿರಂಜೀವಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಪ್ರಧಾನ ಮಾಡಲಾಯ್ತು. ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿ ಹೈದರಾಬಾದ್ಗೆ ಬಂದ ಚಿರಂಜೀವಿ, ಮಾಧ್ಯಮಗಳೊಟ್ಟಿಗೆ ಮಾತನಾಡುತ್ತಾ, ತಮಗೆ ಯಾವುದೇ ರಾಜಕೀಯ ಪಕ್ಷದೊಟ್ಟಿಗೆ ಸಂಬಂಧ ಇಲ್ಲವೆಂದು ಹೇಳಿದ್ದಾರೆ. ಇದು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ. ಪವನ್ ಕಲ್ಯಾಣ್ ಹಾಗೂ ಅವರ ಪಕ್ಷಕ್ಕೆ ಬೆಂಬಲಿಸಿ ಎಂದು ಮನವಿ ಮಾಡಿದ್ದ ಚಿರಂಜೀವಿ, ಈಗ ತಾವು ಯಾವುದೇ ರಾಜಕೀಯ ಪಕ್ಷದೊಟ್ಟಿಗೆ ಗುರುತಿಸಿಕೊಂಡಿಲ್ಲ ಎಂದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.