ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇತ್ತೀಚೆಗಷ್ಟೇ ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಇದು ಶಿವಣ್ಣ ನಟನೆಯ ಮೊದಲ ತಮಿಳು ಚಿತ್ರವಾಗಿದ್ದು, ಮಂಗಳೂರಿನಲ್ಲಿ ನಡೆದ ಚಿತ್ರೀಕರಣದಲ್ಲಿ ರಜನಿ ಜೊತೆ ಶಿವರಾಜ್ ಕುಮಾರ್ ಕೂಡ ಭಾಗಿಯಾಗಿದ್ದರು. ತಮ್ಮ ಭಾಗದ ಬಹುತೇಕ ಚಿತ್ರೀಕರಣ ಮುಗಿಸಿಕೊಟ್ಟ ಶಿವಣ್ಣ, ಇದೀಗ ಮತ್ತೊಂದು ತಮಿಳು ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.
ಜೈಲರ್ ಸಿನಿಮಾವನ್ನು ಒಪ್ಪಿಕೊಳ್ಳುತ್ತಿದ್ದಂತೆಯೇ ತಮಿಳು ಚಿತ್ರರಂಗದಿಂದ ಅವರಿಗೆ ಮತ್ತೊಂದು ಆಫರ್ ಬಂತು. ಅದು ರಜನಿಕಾಂತ್ ಅವರ ಮಾಜಿ ಅಳಿಯ ಧನುಷ್ಯ ನಟನೆಯ ಚಿತ್ರವಾಗಿತ್ತು. ಈ ಸಿನಿಮಾವನ್ನೂ ಶಿವರಾಜ್ ಕುಮಾರ್ ಒಪ್ಪಿಕೊಂಡರು. ಈಗ ಇದೇ ಸಿನಿಮಾದ ಚಿತ್ರೀಕರಣಕ್ಕೆ ಅವರು ತೆರಳಿದ್ದಾರೆ. ಕುಟ್ರಾಂನಲ್ಲಿ ಇಂದಿನಿಂದ ನಡೆಯುತ್ತಿರುವ ಶೂಟ್ ನಲ್ಲಿ ಅವರು ಭಾಗಿಯಾಗಿದ್ದಾರೆ. ಇಲ್ಲಿ ಹತ್ತು ದಿನಗಳ ಕಾಲ ಶೂಟಿಂಗ್ ನಡೆಯಲಿದೆ ಎನ್ನಲಾಗುತ್ತಿದೆ.
ಧನುಷ್ ನಟನೆಯ ಈ ಚಿತ್ರಕ್ಕೆ ‘ಕ್ಯಾಪ್ಟನ್ ಮಿಲ್ಲರ್’ ಎಂದು ಹೆಸರಿಡಲಾಗಿದೆ. ಅರುಣ್ ಮಾಥೇಶ್ವರನ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬರಲಿದ್ದು, ಸ್ವಾತಂತ್ರ್ಯ ಪೂರ್ವದಲ್ಲಿ ನಡೆಯುವ ಕಥೆಯನ್ನು ಚಿತ್ರವಾಗಿಸುತ್ತಿದ್ದಾರೆ ನಿರ್ದೇಶಕರು. ಪ್ರಿಯಾಂಕಾ ಮೋಹನ್, ಸುಮೇಶ್ ಮೂರ್, ಕಿಶನ್ ಸೇರಿದಂತೆ ಹಲವು ಕಲಾವಿದರು ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.