ಖಾಲಿ ಹೊಟ್ಟೆಯಲ್ಲಿ ಫ್ರೂಟ್ ಜ್ಯೂಸ್ ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ನಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುವಲ್ಲಿ ನಮ್ಮ ದಿನದ ಪ್ರಥಮ ಆಹಾರ ಮಹತ್ತರ ಪಾತ್ರ ವಹಿಸುತ್ತದೆ. ಏಕೆಂದರೆ, ರಾತ್ರಿಯ ವಿಶ್ರಾಂತಿಯ ಸಮಯದಲ್ಲಿ ನಮ್ಮ ದೇಹ ಹಲವಾರು ಅನೈಚ್ಛಿಕ ಕಾರ್ಯಗಳನ್ನು ನೆರವೇರಿಸಿ ಬೆಳಗ್ಗೆದ್ದ ಬಳಿಕ ಮೆದುಳು ನಿಯಂತ್ರಿಸುವ ಐಚ್ಛಿಕ ಕಾರ್ಯಗಳು ಪ್ರಾರಂಭಗೊಳ್ಳುತ್ತವೆ.
ಸಹಜವಾಗಿ, ಜಠರ ಖಾಲಿಯಾಗಿರುವ ಕಾರಣ ಕೊಂಚ ಹಸಿವೂ ಕಾಣಿಸಿಕೊಳ್ಳುತ್ತದೆ. ಈ ಹಸಿವನ್ನು ನೀಗಿಸಲು ಹಲವರು ಸಿಹಿಯಾದ ಹಣ್ಣಿನ ರಸಗಳನ್ನು ಸೇವಿಸಲು ಇಷ್ಟಪಡುತ್ತಾರೆ. ಹಣ್ಣಿನ ರಸಗಳು ಪೋಷಕಾಂಶಗಳಿಂದ ಭರಿತವಾದ ಅದ್ಭುತ ಆಹಾರಗಳೇನೋ ಸರಿ, ಆದರೆ, ಇದನ್ನು ದಿನದ ಪ್ರಥಮ ಆಹಾರವಾಗಿ ಸೇವಿಸಿದರೆ ಇದು ಒಳ್ಳೆಯದು ಮಾಡುವುದಕ್ಕಿಂತ ಕೆಟ್ಟದ್ದು ಮಾಡುವುದೇ ಹೆಚ್ಚು. ವಾಸ್ತವದಲ್ಲಿ, ಇದು ಕೆಲವಾರು ಅನಾರೋಗ್ಯಗಳಿಗೆ ಮೂಲವೂ ಆಗಬಹುದು.
ತಾಜಾ ಹಣ್ಣುಗಳಲ್ಲಿ ಕರಗುವ ಮತ್ತು ಕರಗದ ನಾರಿನಂಶಗಳಿದ್ದು ಈ ಆಹಾರವನ್ನು ಜೀರ್ಣಿಸಿಕೊಳ್ಳಲು ನಮ್ಮ ಜೀರ್ಣಾಂಗಗಳಿಗೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ರಕ್ತದಲ್ಲಿ ಸಕ್ಕರೆಯ ಪ್ರಮಾಣ ನಿಧಾನವಾಗಿಯೇ ಆಗಮಿಸುತ್ತದೆ. ಆದರೆ ಹಣ್ಣಿನ ರಸಗಳಲ್ಲಿ ಈ ನಾರಿನಂಶವನ್ನು ನಿವಾರಿಸಿರುವ ಕಾರಣ ಈ ಆಹಾರವನ್ನು ನಮ್ಮ ಜೀರ್ಣಾಂಗಗಳು ಅತಿ ಕಡಿಮೆ ಸಮಯದಲ್ಲಿ ಜೀರ್ಣಿಸಿಕೊಂಡು ಸಕ್ಕರೆಯನ್ನು ರಕ್ತಕ್ಕೆ ಬಿಡುಗಡೆ ಮಾಡುತ್ತವೆ. ಆಗ, ರಕ್ತದಲ್ಲಿ ಸಕ್ಕರೆಯ ಮಟ್ಟ ಧಿಡೀರನೇ ಏರುತ್ತದೆ. ಇದನ್ನೇ ವೈದ್ಯರು ಶುಗರ್ ಸ್ಪೈಕ್ ಎಂದು ಗುರುತಿಸುತ್ತಾರೆ. ಇದು ಅನಾರೋಗ್ಯಕರ ಬೆಳವಣಿಗೆಯಾಗಿದ್ದು ಹೃದಯ ಹಾಗೂ ಇತರ ಅಂಗಗಳಿಗೆ ಸಂಬಂಧಿಸಿದ ರೋಗಗಳು ಆವರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ರಕ್ತದಲ್ಲಿ ಸಕ್ಕರೆಯ ಮಟ್ಟ ಧಿಡೀರನೇ ಏರಿದಂತೆಯೇ ಕೊಂಚ ಹೊತ್ತಿನ ಬಳಿಕ ಹಾಗೇ ಧಿಡೀರನೇ ಇಳಿಯುತ್ತದೆ. ಈ ಇಳಿಕೆಯಿಂದಾಗಿ
ಕ್ಯಾಲೋರಿಗಳೂ ಕಡಿಮೆಯಾಗುವ ಕಾರಣ ಸುಸ್ತು ಮತ್ತು ಬಳಲಿಕೆಯ ಭಾವನೆಯನ್ನು ಮೂಡಿಸುತ್ತದೆ. ಮೆದುಳು ಈ ಬಳಲಿಕೆಯನ್ನು ಹಸಿವಿನ ಸಂಕೇತವಾಗಿ ಪರಿಗಣಿಸುವ ಕಾರಣ ಏನನ್ನಾದರೂ ತಿನ್ನುವ ಬಯಕೆ ಭುಗಿಲೇಳುತ್ತದೆ. ಖಾಲಿಹೊಟ್ಟೆಯಲ್ಲಿ ಹಣ್ಣಿನ ರಸದ ಸೇವನೆ ದಂತಗಳ ಆರೋಗ್ಯಕ್ಕೆ ಮಾರಕವಾಗಿದೆ. ಏಕೆಂದರೆ, ಹಣ್ಣಿನ ರಸಗಳು ಕೊಂಚ ಆಮ್ಲೀಯವಾಗಿದ್ದು ಇವು ಹಲ್ಲುಗಳ ಹೊರಕವಚವನ್ನು ಕರಗಿಸಿ ದಂತಕುಳಿ ಹಾಗೂ ಹಲ್ಲುಗಳು ಜುಮ್ಮೆನ್ನುವ ಸಂವೇದನೆ ಎದುರಾಗಲು ಕಾರಣವಾಗಬಹುದು. ಇದೇ ರಸವನ್ನು ನಾವು ಮಧ್ಯಾಹ್ನ ಅಥವಾ ರಾತ್ರಿಯ ಊಟದ ಜೊತೆಗೆ ಸೇವಿಸಿದಾಗ ಇತರ ಆಹಾರಗಳು ಈ ಆಮ್ಲೀಯತೆಯನ್ನು ಕನಿಷ್ಟಗೊಳಿಸಿರುತ್ತವೆ ಅಥವಾ ಕ್ಷಾರೀಯ ಆಹಾರಗಳು ಆಮ್ಲೀಯತೆಯನ್ನು ಸಂಪೂರ್ಣವಾಗಿ ಸಮತೋಲನಗೊಳಿಸಿರುತ್ತದೆ. ಹಾಗಾಗಿ, ಉಳಿದ ಹೊತ್ತಿನಲ್ಲಿ ಸೇವಿಸಿದ ರಸಗಳು ಹಲ್ಲುಗಳಿಗೆ ಹಾನಿ ಉಂಟು ಮಾಡಲಾರವು
ನಿಸರ್ಗ ಹಣ್ಣುಗಳನ್ನು ನಾರಿನಂಶದ ಜೊತೆಗೇ ನೀಡಿರುವುದು ನಮ್ಮ ಜೀರ್ಣಾಂಗಗಳಿಗೆ ಜೀರ್ಣಿಸಲು ಸುಲಭವಾಗಲೆಂದೇ ಹೊರತು ಹಣ್ಣಿನ ರಸದ ರೂಪದಲ್ಲಿ ಸೇವಿಸಲು ಅಲ್ಲ. ನಮ್ಮ ಜೀರ್ಣಾಂಗಗಳಲ್ಲಿ ಆಹಾರ ಜೀರ್ಣಗೊಳ್ಳಲು ಹಾಗೂ ಜೀರ್ಣಗೊಂಡ ಆಹಾರ ಮುಂದೆ ಚಲಿಸಲು ನಾರಿನಂಶ ಅತಿ ಅಗತ್ಯ. ಹಣ್ಣಿನ ರಸದಲ್ಲಿ ನಾರಿನಂಶವನ್ನು ನಿವಾರಿಸಿರುವ ಕಾರಣ ಮಲಬದ್ದತೆ ಹಾಗೂ ಜೀರ್ಣಾಂಗ ವ್ಯವಸ್ಥೆ ಏರುಪೇರುಗೊಳ್ಳಲು ಕಾರಣವಾಗಬಹುದು
ಖಾಲಿಹೊಟ್ಟೆಯಲ್ಲಿ ಹಣ್ಣಿನ ರಸದ ಸೇವನೆ ಅನಾರೋಗ್ಯಕರ ಸರಿ, ಆದರೆ ಮಧ್ಯಾಹ್ನ ಮತ್ತು ರಾತ್ರಿಯ ಊಟದೊಂದಿಗೆ ಸೇವಿಸಿದಾಗ ಈ ಕೆಳಗಿನ ಪ್ರಯೋಜನಗಳು ದೊರಕುತ್ತವೆ.
ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಿತ ಮಟ್ಟದಲ್ಲಿರುತ್ತದೆ ಹಾಗೂ ಊಟದೊಂದಿಗೆ ಸೇವಿಸಿದಾಗ ಹಸಿವಿನ ಭಾವನೆಯನ್ನು ತಗ್ಗಿಸುತ್ತದೆ.