ಸ್ಯಾಂಡಲ್ವುಡ್ ನಟ ಡಾರ್ಲಿಂಗ್ ಕೃಷ್ಣ ತಮ್ಮ ಮೊದಲ ಪ್ಯಾನ್ ಇಂಡಿಯಾ ಚಿತ್ರ‘ಹಲಗಲಿ’ ಇಂದ ಹೊರಬಂದಿದ್ದಾರೆ. ಒಂದೇ ಚಿತ್ರಕ್ಕೆ 3 ವರ್ಷ ಡೇಟ್ಸ್ ಕೊಡೋಕೆ ಆಗಲ್ಲ ಎಂಬ ಕಾರಣಕ್ಕೆ ಚಿತ್ರದಿಂದ ಕೃಷ್ಣ ಹೊರ ಬಂದಿದ್ದರು. ಈ ಬಗ್ಗೆ ಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
‘ಹಲಗಲಿ’ ಸಿನಿಮಾ ಅತೀ ದೊಡ್ಡ ಪ್ರಾಜೆಕ್ಟ್ ಆದರೆ ಬೇರೆ ಸಿನಿಮಾಗಳಲ್ಲಿ ನಟಿಸುತ್ತಾ ಈ ಚಿತ್ರದಲ್ಲಿ ನಟಿಸಲು ಡಾರ್ಲಿಂಗ್ ಕೃಷ್ಣ ರೆಡಿ ಇದ್ದರು. ಆದರೆ ಚಿತ್ರತಂಡ ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಮೂರು ವರ್ಷ ಬೇರೆ ಸಿನಿಮಾದಲ್ಲಿ ನಟಿಸದೇ ಈ ಸಿನಿಮಾಗಾಗಿ ಮೀಸಲಿಡಲು ಸಾಧ್ಯವಿಲ್ಲ ಎಂದು ಕೃಷ್ಣ ಸಿನಿಮಾದಿಂದ ಹೊರಬಂದಿರುವುದಾಗಿ ಕೃಷ್ಣ ಹೇಳಿದ್ದಾರೆ.
‘ಹಲಗಲಿ’ ಸಿನಿಮಾಗಾಗಿ ಕಳೆದ 6 ತಿಂಗಳಿಂದ ಬೇರೆ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿರಲಿಲ್ಲ. ಇತ್ತೀಚೆಗೆ ಫಾದರ್ ಸಿನಿಮಾದ ಆಫರ್ ಸಿಕ್ಕಿದೆ. ಇದಾದ ನಂತರ ಮತ್ತೆ ನಿರ್ದೇಶಕ ಶಶಾಂಕ್ ಜೊತೆ ಹೊಸ ಸಿನಿಮಾ ಮಾಡುವ ಬಗ್ಗೆ ಕೃಷ್ಣ ತಿಳಿಸಿದ್ದರು. ಆದರೆ ‘ಹಲಗಲಿ’ ಚಿತ್ರತಂಡ 3 ವರ್ಷದ ಕಮೀಟ್ಮೆಂಟ್ ಕೇಳಿದ್ರಿಂದ ಚಿತ್ರ ಕೈಬೀಡಬೇಕಾಯ್ತು . ಅದು ಬಿಟ್ಟು ಬೇರೆ ಏನು ವೈಯಕ್ತಿಕ ಕಾರಣ ಇಲ್ಲ ಎಂದು ಡಾರ್ಲಿಂಗ್ ಕೃಷ್ಣ ತಿಳಿಸಿದ್ದಾರೆ.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗೆರಿಲ್ಲಾ ವಾರ್ ಮಾಡುವ ಮೂಲಕ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದ ಹಲಗಲಿ ಬೇಡರ ಕಥೆಯನ್ನು ಸಿನಿಮಾ ನಿರ್ದೇಶಕ ಸುಕೇಶ್ ಡಿ.ಕೆ. ಮಾಡುತ್ತಿದ್ದಾರೆ. ಇದೊಂದು ಐತಿಹಾಸಿಕ ಸಿನಿಮಾವಾಗಿದ್ದರಿಂದ ಮತ್ತು ಆ ಕಾಲ ಘಟ್ಟವನ್ನು ಕಟ್ಟಿ ಕೊಡಬೇಕಾಗಿದ್ದರಿಂದ ಬರೋಬ್ಬರಿ 80 ಕೋಟಿ ರೂಪಾಯಿಯನ್ನು ಈ ಸಿನಿಮಾಗಾಗಿ ಖರ್ಚು ಮಾಡುತ್ತಿದ್ದಾರೆ ನಿರ್ಮಾಪಕ ಕಲ್ಯಾಣ್ ಚಕ್ರವರ್ತಿ ಧೂಳಿಪಳ್ಯ. ಇದೊಂದು ಅಪರೂಪದ ಕಥೆಯಾಗಿರುವುದರಿಂದ ಸಂಪೂರ್ಣವಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.