ಆಂಧ್ರ ಪ್ರದೇಶದ ಬಾಪಟ್ಲಾ ಜಿಲ್ಲೆಯ ಹೈದರಾಬಾದ್-ವಿಜಯವಾಡ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಆರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಬಾಪಟ್ಲಾದಿಂದ ಹೈದರಾಬಾದ್ಗೆ ಹೋಗುತ್ತಿದ್ದ ಬಸ್, ಟ್ರಕ್ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಜೀವ ದಹನವಾಗಿದ್ದಾರೆ.
ಈ ರಸ್ತೆ ಅಪಘಾತದಲ್ಲಿ 32 ಮಂದಿ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಪಘಾತದ ಭಯಾನಕ ದೃಶ್ಯಗಳು ವೈರಲ್ ಆಗುತ್ತಿವೆ. ದೃಶ್ಯಗಳಲ್ಲಿ ಬಸ್ ಹೊತ್ತಿ ಉರಿಯುತ್ತಿರೋದನ್ನು ಕಾಣಬಹುದು. ಡಿಕ್ಕಿಯಿಂದ ಹೊತ್ತಿಕೊಂಡ ಬೆಂಕಿಯಿಂದಾಗಿ ಬಸ್ ಮತ್ತು ಟ್ರಕ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಬಾಪಟ್ಲದಿಂದ ಮತ ಚಲಾಯಿಸಿ ಹಿಂತಿರುಗುತ್ತಿದ್ದರು ಎಂದು ಹೇಳಲಾಗಿದೆ.
ಹೈದರಾಬಾದ್-ವಿಜಯವಾಡ ಹೆದ್ದಾರಿಯ ಚಿಲಕಲೂರಿಪೇಟೆ ಮಂಡಲದ ಬಳಿ ಬಸ್ ಟ್ರಕ್ಗೆ ಡಿಕ್ಕಿ ಹೊಡೆದಿದೆ. ಅಪಘಾತ ಸಂಭವಿಸಿದ ಕೂಡಲೇ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಅಪಘಾತದ ವೇಳೆ ಬಸ್ನಲ್ಲಿ 42 ಮಂದಿ ಪ್ರಯಾಣಿಸುತ್ತಿದ್ದರು ಎಂದು ಗಾಯಾಳುಗಳು ತಿಳಿಸಿದ್ದಾರೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಾಣ ಕಳೆದುಕೊಂಡವರಲ್ಲಿ 8 ವರ್ಷದ ಬಾಲಕಿಯೂ ಸೇರಿದ್ದಾಳೆ.