ಕಾಫಿ ಹಾಗೂ ಟೀ ಎಂದರೇ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಬೆಳಗ್ಗೆ ಎದ್ದು, ಹಾಲು, ಕಾಫಿ, ಟೀ ಇಲ್ಲದೇ ಇದ್ರೆ ಲೈಫ್ ಬೋರು ಅಂತಾರೇ ಜನರು. ಅದರಲ್ಲೂ ಕೆಲವರಂತೂ ಟೀ ಹಾಗೂ ಕಾಫಿಯಿಂದಲೇ ದಿನವನ್ನು ಶುರು ಮಾಡುತ್ತಾರೆ. ಬೆಳಗ್ಗೆ ಎದ್ದಾಗ ಒಂದು ಟೀ. ಟಿಫನ್ ಬಳಿಕ ಒಂದು ಟೀ. ಮಧ್ಯಾಹ್ನ ಊಟದ ಬಳಿಕ ಒಂದು ಟೀ. ಹೀಗೆ ದಿನದಲ್ಲಿ ಐದಾರು ಭಾರೀ ಟೀ ಅಥವಾ ಕಾಫಿ ಕುಡಿಯೋ ಜನರು ಇದ್ದಾರೆ. ಆದರೆ ಈ ಟೀ, ಕಾಫಿ ಲವರ್ಸ್ ಈ ಸ್ಟೋರಿ ಓದಲೇಬೇಕು.
ನೀವೇನಾದರೂ ಊಟವಾದ ಬಳಿಕ ಅಥವಾ ಮೊದಲು ಟೀ, ಕಾಫಿ ಸೇವಿಸುತ್ತಿದ್ದರೆ ಈ ಕೂಡಲೇ ಆ ಅಭ್ಯಾಸವನ್ನು ಬಿಡಬೇಕು ಅಂತ ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ (ICMR) ಆಘಾತಕಾರಿ ಮಾಹಿತಿಯೊಂದನ್ನು ಬಿಡುಗಡೆ ಮಾಡಿದೆ. ಹೌದು, ಊಟಕ್ಕಿಂತ ಮೊದಲ ಅಥವಾ 1 ಗಂಟೆ ನಂತರ ಟೀ, ಕಾಫಿ ಸೇವಿಸಬೇಕು. ಏಕೆಂದರೆ ಈ ಪಾನೀಯಗಳು ಆಹಾರದಲ್ಲಿನ ಕಬ್ಬಿಣಾಂಶವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ರಕ್ತ ಉತ್ಪಾದನೆಗೆ ಕಬ್ಬಿಣಾಂಶ ಅತ್ಯಗತ್ಯ. ದೇಹದ ಶೇ.70ರಷ್ಟು ಕಬ್ಬಿಣಾಂಶವು ಹೀಮೊಗ್ಲೋಬಿನ್ ಕೆಂಪು ರಕ್ತಕಣಗಳಲ್ಲಿ ಇರುತ್ತದೆ. ಹೀಗಾಗಿ ಟೀ ಅಥವಾ ಕಾಫಿ ಕುಡಿಯುವುದರಿಂದ ಕಬ್ಬಿಣಾಂಶ ಕೊರತೆಯಾಗಿ ರಕ್ತಹೀನತೆಗೆ ಕಾರಣವಾಗುತ್ತದೆ ಎಂದು ಐಸಿಎಂಆರ್ ತಿಳಿಸಿದೆ.
ಆಗಾಗ ದಣಿವು ಅಥವಾ ಶಕ್ತಿಯ ಕೊರತೆ ಉಂಟಾಗುತ್ತದೆ. ಉಸಿರಾಟದ ತೊಂದರೆ, ತಲೆನೋವು, ತ್ವರಿತ ಹೃದಯ ಬಡಿತ, ಉಗುರುಗಳು ಸೀಳುವುದು ಅಥವಾ ಕೂದಲು ಉದುರುವಿಕೆ. ಇದಲ್ಲದೆ, ICMR ಸಂಶೋಧಕರು ಹಾಲು ಇಲ್ಲದೆ ಚಹಾವನ್ನು ಸೇವಿಸುವುದರಿಂದ ರಕ್ತ ಪರಿಚಲನೆಯನ್ನು ಉತ್ತೇಜಿಸಬಹುದು. ಜೊತೆಗೆ ಹೊಟ್ಟೆಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಮತ್ತೊಂದೆಡೆ, ಹೆಚ್ಚಿನ ಮಟ್ಟದ ಕಾಫಿ ಸೇವನೆಯು ಅಧಿಕ ರಕ್ತದೊತ್ತಡ ಮತ್ತು ಹೃದಯ ಬಡಿತದಲ್ಲಿನ ಅಸಹಜತೆಗಳಿಗೆ ಸಂಬಂಧಿಸಿದೆ.