ವಿಶ್ವಸಂಸ್ಥೆಯ ಸುರಕ್ಷೆ ಮತ್ತು ಭದ್ರತಾ ಇಲಾಖೆ (ಯುಎನ್ ಡಿಎಸ್ಎಸ್) ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯ ಸೇನೆಯ ನಿವೃತ್ತ ಕರ್ನಲ್ ವೈಭವ್ ಅನಿಲ್ ಕಾಳೆ (46) ಯುದ್ಧಪೀಡಿತ ಗಾಝಾದಲ್ಲಿ ನಿಧನರಾಗಿದ್ದಾರೆ.
ಮೃತ ಕಾಳೆಯವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದು ಎಲ್ಲರೂ ಪುಣೆಯಲ್ಲಿ ವಾಸವಿದ್ದಾರೆ. ಕಾಳೆ ಒಂದು ತಿಂಗಳ ಹಿಂದಷ್ಟೇ ವಿಶ್ವಸಂಸ್ಥೆಯ ಇಲಾಖೆಗೆ ಸೇರಿದ್ದರು. ರಫ್ಹಾ ಪಟ್ಟಣದ ಯೂರೋಪಿಯನ್ ಆಸ್ಪತ್ರೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಖಾನ್ ಯೂನಿಸ್ ನಲ್ಲಿ ಅವರ ವಾಹನದ ಮೇಲೆ ಗುಂಡಿನ ದಾಳಿ ನಡೆದಿದ್ದು ಈ ವೇಳೆ ಕೊನೆಯುಸಿರೆಳೆದಿದ್ದಾರೆ.
ಯುನ್ ಡಿಎಸ್ಎಸ್ ನ ಮತ್ತೊಬ್ಬ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ವಿಶ್ವಸಂಸ್ಥೆಯ ವಾಹನ ಎಂದು ಸ್ಪಷ್ಟವಾಗಿ ಫಲಕವಿದ್ದರೂ, ಅದರ ಮೇಲೆ ದಾಳಿ ನಡೆಸಿದ್ದು ಯಾರು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಕಳೆದ ವರ್ಷದ ಅಕ್ಟೋಬರ್ 7ರಂದು ಆರಂಭವಾದ ಹಮಾಸ್-ಇಸ್ರೇಲ್ ಸಂಘರ್ಷದಿಂದ ಮೃತಪಟ್ಟ ಜಾಗತಿಕ ಸಂಸ್ಥೆಯ ಮೊಟ್ಟಮೊದಲ ಅಂತರಾಷ್ಟ್ರೀಯ ಯೋಧನ ಸಾವು ಇದಾಗಿದೆ.
ಈ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್, ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಮಾನವೀಯ ಕಾರ್ಯಕರ್ತರನ್ನು ರಕ್ಷಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ದಾಳಿ ಬಗ್ಗೆ ಇಸ್ರೇಲ್ ತನಿಖೆ ಆರಂಭಿಸಿದೆ ಎಂದು ತಿಳಿದು ಬಂದಿದೆ.
2000ನೇ ಇಸವಿಯ ಜೂನ್ ನಲ್ಲಿ ಭಾರತೀಯ ಸೇನಾ ಅಕಾಡೆಮಿಯಲ್ಲಿ ಉತ್ತೀರ್ಣರಾದ ಬಳಿಕ 11 ಜಮ್ಮು & ಕಾಶ್ಮೀರ ರೈಫಲ್ ನಲ್ಲಿ ನಿಯೋಜಿತರಾದ ಕಾಳೆ, ಕಾಶ್ಮೀರ ಮತ್ತು ಈಶಾನ್ಯ ಭಾರತ ಸೇರಿದಂತೆ ದೇಶದ ವಿವಿಧೆಡೆ ಸೇವೆ ಸಲ್ಲಿಸಿದ್ದರು. 2022ರಲ್ಲಿ ಅವಧಿಪೂರ್ವ ನಿವೃತ್ತಿ ಪಡೆದಿದ್ದರು.