ವಿಶ್ವದ ಶ್ರೀಮಂತ ವ್ಯಕ್ತಿ ಹಾಗೂ ಮೈಕ್ರೋಸಾಫ್ಟ್ ದಿಗ್ಗಜ ಬಿಲ್ ಗೇಟ್ಸ್ ಭಾರತ ಪ್ರವಾಸ ಮುಗಿಸಿ ತವರಿಗೆ ವಾಪಸ್ಸಾಗಿದ್ದಾರೆ. ಇದೀಗ ಭಾರತದ ಪ್ರವಾಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಬಿಲ್ಗೇಟ್ಸ್ ಮತ್ತೆ ಭಾರತಕ್ಕೆ ಆಗಮಿಸಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ಟ್ವಿಟ್ ಮೂಲಕ ಹೇಳಿಕೊಂಡಿದ್ದಾರೆ.
ಭಾರತದ ಪ್ರವಾಸದ ಬಗ್ಗೆ ಸರಣಿ ಟ್ವೀಟ್ಗಳನ್ನು ಮಾಡಿರುವ ಬಿಲ್ಗೇಟ್ಸ್ ಕಳೆದ ಕೆಲ ದಿನಗಳಲ್ಲಿ ಭಾರತದಲ್ಲಿ ಸುಂದರವಾದ ದಿನಗಳನ್ನು ಕಳೆದಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಾಕಷ್ಟು ಗಣ್ಯರ ಭೇಟಿ ಹಾಗೂ ಬೆಂಗಳೂರು ನಗರಕ್ಕೆ ಭೇಟಿ ನೀಡಿರುವ ವಿಚಾರವನ್ನೂ ಖುಷಿಯಿಂದ ಪೋಸ್ಟ್ ಮಾಡಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜತೆ ಮಾತನಾಡುವುದು ಸಂತಸದ ವಿಚಾರ ಹಾಗೂ ಭಾರತವು ಆರೋಗ್ಯ, ಆರ್ಥಿಕ ಒಳಗೊಳ್ಳುವಿಕೆ, ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಡಿಜಿಟಲೈಸೇಷನ್ನಲ್ಲಿ ಹೇಗೆ ಮುನ್ನುಗ್ಗುತ್ತಿದೆ ಎಂಬುದನ್ನು ಚಿರ್ಚಿಸಿರುವುದು ಖುಷಿ ತಂದಿದೆ ಎಂದು ಬರೆದುಕೊಂಡಿದ್ದಾರೆ.
ನನ್ನ ಭಾರತ ಪ್ರವಾಸವು ಮುಂಬೈನಿಂದ ಆರಂಭವಾಗಿ ಅಲ್ಲಿನ ನಗರ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಟಿಬಿ ರೋಗಿಗಳ ಜತೆ ಸಮಾಲೋಚನೆ ನಡೆಸಿದೆ, ಭಾರತವು ವಿಶ್ವದಲ್ಲಿ ಅತಿ ಹೆಚ್ಚು ಟಿಬಿ ಪ್ರಕರಣವನ್ನು ಹೊಂದಿದೆ ಹಾಗಾಗಿ ಇದು ತುಂಬಾ ಪ್ರಮುಖವಾಗಿದೆ ಎಂದು ಗೇಟ್ಸ್ ಹೇಳಿದ್ದಾರೆ.
ಅಯ್ಯೋ ಶ್ರದ್ಧಾ ಅವರನ್ನು ಕೂಡ ಭೇಟಿ ಮಾಡಿರುವುದನ್ನು ಉಲ್ಲೇಖಿಸಿರುವ ಬಿಲ್ಗೇಟ್ಸ್ ನಗರ ಆರೋಗ್ಯಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿ ಅಯ್ಯೋ ಶ್ರದ್ಧಾ ನನ್ನನ್ನು ಭೇಟಿ ಮಾಡಿದೆ ಅವರು ಅತ್ಯುತ್ತಮ ಹಾಸ್ಯಗಾರ್ತಿ ಎಂದರು. ಭಾರತದಲ್ಲಿ ಟಿಬಿ ಪ್ರಕರಣವನ್ನು ತಗ್ಗಿಸುವ ಕುರಿತು ಅತ್ಯುತ್ತಮ ಸಂವಾದ ನಡೆಸಿದೆ. ಹಾಗೆಯೇ ಹೊಸ ವಿಚಾರಧಾರೆಗಳೊಂದಿಗೆ ನಾಯಕರು ಹೇಗೆ ಬರುತ್ತಿದ್ದಾರೆ ಎನ್ನುವ ಕುರಿತು ಚರ್ಚೆ ನಡೆಸಲಾಯಿತು ಎಂದರು.