ಢಾಕಾ: 7 ಅಂತಸ್ತಿನ ಕಟ್ಟಡದಲ್ಲಿ ಉಂಟಾದ ಭಾರೀ ಸ್ಫೋಟದಿಂದ 14 ಮಂದಿ ಮೃತಪಟ್ಟಿದ್ದು, 100ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ಬಾಂಗ್ಲಾದೇಶ ಢಾಕಾದ ಗುಲಿಸ್ತಾನ್ ಪ್ರದೇಶದಲ್ಲಿ ನಡೆದಿದೆ.
ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಘಟನೆ ನಡೆದಿದೆ. 11 ಅಗ್ನಿಶಾಮಕ ಸೇವೆಗಳ ತುರ್ತು ಘಟಕಗಳು ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಗಾಯಗೊಂಡವರನ್ನ ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಫೋಟ ಸಂಭವಿಸಿದ ಸ್ಥಳದಿಂದ ಸಮೀಪದ ಕಟ್ಟಡಗಳಿಗೂ ಹಾನಿಯಾಗಿದೆ. ರಸ್ತೆಯಲ್ಲಿ ನಿಂತಿದ್ದ ಬಸ್ಗಳೂ ಸಾಕಷ್ಟು ಹಾನಿಯಾಗಿದೆ. ಕಟ್ಟಡದ ನೆಲ ಮಳಿಗೆಯಲ್ಲಿ ಇನ್ನಷ್ಟು ಮಂದಿ ಸಿಲುಕಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಜನನಿಬಿಡ ಸಿದ್ದಿಕ್ ಬಜಾರ್ನಲ್ಲಿರುವ ಈ ಕಟ್ಟಡವು ಹಲವಾರು ಕಚೇರಿಗಳು ಮತ್ತು ಮಳಿಗೆಗಳನ್ನ ಹೊಂದಿರುವ ವಾಣಿಜ್ಯ ಕಟ್ಟಡವಾಗಿತ್ತು. ನೆಲಮಹಡಿಯಲ್ಲಿ ನೈರ್ಮಲ್ಯ ಸಾಮಗ್ರಿಗಳನ್ನ ಮಾರಾಟ ಮಾಡುವ ಅಂಗಡಿಗಳಿದ್ದು, ಅಲ್ಲಿಯೇ ಸ್ಫೋಟ ಸಂಭವಿಸಿದೆ ಎನ್ನಲಾಗುತ್ತಿದೆ.