ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ಅಕ್ರಮಣಕಾರಿ ದಾಳಿಯ ಬಗ್ಗೆ ಮೌನವಾಗಿರುವ ಸಿಲೆಬ್ರಿಟಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಮೂಹಿಕವಾಗಿ ಬಹಿಷ್ಕರಿಸುವ ಆನ್ಲೈನ್ ಚಳುವಳಿ ಆರಂಭಗೊಂಡಿದೆ.
ಮೇ 6ರಂದು ನಡೆದ ಮೆಟ್ ಗಾಲಾ ಕಾರ್ಯಾಕ್ರಮದಲ್ಲಿ ಗಾಝಾ ಬಿಕ್ಕಟ್ಟಿನ ಬಗ್ಗೆ ಸೋಶಿಯಲ್ ಮೆಡಿಯಾ ಇನ್ಫ್ಲುಯೆನ್ಸರ್ ಹ್ಯಾಲಿ ಕಾಲಿಲ್ ಎಂಬಾಕೆ ಅಸಂವೇದನಾತ್ಮಕವಾಗಿ ಮಾತನಾಡಿದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ”ಬ್ಲಾಕ್ಔಟ್ 2024” ಎಂಬ ಅಭಿಯಾನ ಆರಂಭಗೊಂಡಿತ್ತು.
ಟಿಕ್ಟಾಕ್ನಲ್ಲಿ 99 ಲಕ್ಷಕ್ಕೂ ಅಧಿಕ ಫಾಲೋವರ್ಗಳನ್ನು ಹೊಂದಿರುವ ಕಾಲಿಲ್ ಅವರು ಮೆಟ್ಗಾಲಾ ಫ್ಯಾಶನ್ ಶೋ ಕಾರ್ಯಕ್ರಮ ನಡೆಯುತ್ತಿರುವ ಸಭಾಭವನದ ಹೊರಭಾಗದಲ್ಲಿ ಅದ್ದೂರಿ ಪೋಷಾಕು ಧರಿಸಿ, ಅವರು ಕೇಕ್ ತಿನ್ನಲಿ ಎಂದು ಹೇಳುವ ವೀಡಿಯೊವನ್ನು ಪೋಸ್ಟ್ ಮಾಡಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು.
ಗಾಝಾದಲ್ಲಿ 34 ,900ಕ್ಕೂ ಅಧಿಕ ನಾಗರಿಕರು ಇಸ್ರೇಲ್ನ ಬಾಂಬ್ ದಾಳಿಗೆ ಬಲಿಯಾಗಿದ್ದು, ಅಲ್ಲಿ ವ್ಯಾಪಕ ಹಸಿವು ತಾಂಡವವಾಡುತ್ತಿರುವ ನಡುವೆ ಕಾಲಿಲ್ ಅಸಂವೇದನಾತ್ಮಕವಾಗಿ ಈ ವೀಡಿಯೊ ಪೋಸ್ಟ್ ಮಾಡಿರುವುದಕ್ಕೆ ಭಾರೀ ಖಂಡನೆ ವ್ಯಕ್ತವಾಗಿತ್ತು. ಇದಕ್ಕೆ ಪಾಪ್ ತಾರೆಯರಾದ ಟೇಲರ್ ಸ್ವಿಫ್ಟ್, ಅರಿಯಾನಾ ಗ್ರಾಂಡೆ,ರಿಹಾನಾ, ಜಸ್ಟಿನ್ ಬೈಬರ್, ಜಸ್ಟಿನ್ ಟಿಂಬರ್ಕ್ಲೇಕ್, ಕಿಮ್ ಜೊನಾಸ್, ರ್ಯಾಪರ್ ಕಾನ್ಯೆ ವೆಸ್ಟ್, ರೂಪದರ್ಶಿ ಕಿಮ್ ಕಾರ್ದಿಶಿಯಾನ್ ಸೇರಿದಂತೆ ಹಲವಾರು ಖ್ಯಾತ ನಾಮರ ಹೆಸರನ್ನು ಬ್ಲಾಕ್ಔಟ್ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಭಾರತೀಯ ಕ್ರಿಕೆಟರ್ ವಿರಾಟ್ ಕೊಹ್ಲಿ, ನಟಿಯರಾದ ಪ್ರಿಯಾಂಕಾ ಚೋಪ್ರಾ, ಅಲಿಯಾ ಭಟ್ ಹೆಸರನ್ನು ಕೂಡಾ ಬ್ಲಾಕ್ ಔಟ್ ಪಟ್ಟಿಯಲ್ಲಿ ಹೆಸರಿಸಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.