ಟೆಹ್ರಾನ್: ಕಳೆದ ವರ್ಷ ನವೆಂಬರ್ನಿಂದ ಇರಾನ್ನಲ್ಲಿ ಹೆಣ್ಣುಮಕ್ಕಳು ಶಾಲೆಗೆ ಹೋಗದಂತೆ ತಡೆಯಲು ನಿಗೂಢವಾಗಿ ವಿಷವುಣಿಸಲಾಗುತ್ತಿತ್ತು. ದೇಶಾದ್ಯಂತ ಸುಮಾರು 5,000 ವಿದ್ಯಾರ್ಥಿನಿಯರಿಗೆ ವಿಷಪ್ರಾಶನವಾಗಿ ಅಸ್ವಸ್ಥರಾದ ಬಳಿಕ ಇದೀಗ ಅಲ್ಲಿನ ಗುಪ್ತಚರ ಸಂಸ್ಥೆ ಘಟನೆಗೆ ಸಂಬಂಧಪಟ್ಟಂತೆ ಮೊದಲ ಬಾರಿ ಬಂಧನ ಪ್ರಕ್ರಿಯೆ ಆರಂಭಿಸಿದೆ.
ಇರಾನ್ನ ಸುಮಾರು 6 ಪ್ರಾಂತ್ಯಗಳಲ್ಲಿ ವಿದ್ಯಾರ್ಥಿನಿಯರಿಗೆ ವಿಷವುಣಿಸಿದ ಆರೋಪದ ಮೇಲೆ ಕೆಲ ವಿದ್ಯಾರ್ಥಿನಿಯರ ಪೋಷಕರು ಸೇರಿದಂತೆ ಹಲವರನ್ನು ಬಂಧನ ಮಾಡಲಾಗಿದೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ. ವರದಿಗಳ ಪ್ರಕಾರ, ಇರಾನ್ನ ಉಪ ಆಂತರಿಕ ಸಚಿವ ಮಜಿದ್ ಮಿರಹ್ಮಾಡಿ, ಗುಪ್ತಚರ ಸಂಸ್ಥೆಗಳು ಆರೋಪಿಗಳ ಬಂಧನ ಕಾರ್ಯವನ್ನು ಪ್ರಾರಂಭಿಸಿದೆ. ಹಲವರನ್ನು ಈಗಾಗಲೇ ಬಂಧನ ಮಾಡಲಾಗಿದೆ. ಸಂಬಂಧಿತ ಏಜೆನ್ಸಿಗಳು ಘಟನೆ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ಇದುವರೆಗೂ ಖುಜೆಸ್ತಾನ್, ಪಶ್ಚಿಮ ಅಜೆರ್ಬೈಜಾನ್, ಫಾರ್ಸ್, ಕೆರ್ಮಾನ್ಶಾ, ಖೊರಾಸನ್ ಹಾಗೂ ಅಲ್ಬೋರ್ಜ್ ಪ್ರದೇಶಗಳಲ್ಲಿ ಹಲವರ ಬಂಧನವಾಗಿದೆ. ನವೆಂಬರ್ನಲ್ಲಿ ಹಿಜಬ್ ಅನ್ನು ಸರಿಯಾಗಿ ಧರಿಸದೇ ಇದ್ದುದಕ್ಕೆ ಮಹ್ಸಾ ಅಮಿನಿ ಎಂಬ ಯುವತಿ ಬಂಧನವಾಗಿ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಳು. ಈ ಸಾವಿನ ಬಳಿಕ ಇರಾನ್ನಾದ್ಯಂತ ಭಾರೀ ಪ್ರತಿಭಟನೆ ನಡೆದು, ಹಲವರು ಸಾವನ್ನಪ್ಪಿದ್ದರು. ಈ ಘಟನೆಯ ಬೆನ್ನಲ್ಲೇ ವಿದ್ಯಾರ್ಥಿನಿಯರಿಗೆ ಶಾಲೆಗೆ ಹೋಗದಂತೆ ತಡೆಯಲು ವಿಷಪ್ರಾಶನ ಮಾಡಿರುವುದಾಗಿ ವರದಿಯಾಗಿದೆ.